ನವದೆಹಲಿ: ಜಿ.ಎಸ್.ಟಿ. ತೆರಿಗೆ ದರವನ್ನು ತರ್ಕಬದ್ದಗೊಳಿಸುವಿಕೆಗೆ ಸಂಬಂಧಿಸಿದಂತೆ ಇಂದು ಶುಕ್ರವಾರ ನವದೆಹಲಿಯಲ್ಲಿ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾಲೋಚನಾ ಸಭೆಯಲ್ಲಿ ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಎಂಟು ರಾಜ್ಯಗಳ ಮಂತ್ರಿಗಳು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಹಾಜರಿದ್ದ ಎಲ್ಲಾ ಮಂತ್ರಿಗಳು ಮತ್ತು ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಪ್ರಸ್ತುತ ಪ್ರಸ್ತಾವನೆಯಿಂದ ರಾಜ್ಯಗಳಿಗೆ ಉಂಟಾಗಬಹುದಾದ ಗಣನೀಯ ಪ್ರಮಾಣದ ರಾಜಸ್ವ ನಷ್ಟದ ಬಗ್ಗೆ ತೀವ್ರ ಕಳಕಳಿಯನ್ನು ವ್ಯಕ್ತಪಡಿಸಿದರು.
ತರುವಾಯ ಸಭೆಯಲ್ಲಿ ಹಾಜರಿದ್ದ ಎಂಟು ರಾಜ್ಯ ಸರ್ಕಾರಗಳ ಕರಡು ಪ್ರಸ್ತಾವನೆಯ ಕುರಿತು ವಿವರವಾದ ಚರ್ಚೆ ನಡೆಯಿತು.
ಚರ್ಚೆಯ ನಂತರ, ರಾಜ್ಯಗಳ ರಾಜಸ್ವದ ಹಿತಾಸಕ್ತಿಗಳನ್ನು ಕಾಪಾಡುವ ಜೊತೆಗೆ ಜಿಎಸ್ಟಿ ದರ ತರ್ಕಬದ್ದ ಗೊಳಿಸುವಿಕೆಯನ್ನು ಸಾಧಿಸಲು ಈ ಕರಡು ಪ್ರಸ್ತಾವನೆಯು ಸಹಾಯಕವಾಗುತ್ತದೆ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.
ಜಿಎಸ್ಟಿ ದರ ತರ್ಕಬದ್ದ ಗೊಳಿಸುವಿಕೆ ಪ್ರಕ್ರಿಯೆಯಿಂದ ಎಲ್ಲಾ ಭಾಗೀದಾರರಿಗೆ ಪರಸ್ಪರ ಅನುಕೂಲಕರ ಪರಿಣಾಮ ಉಂಟಾಗುವ ದೃಷ್ಟಿಯಿಂದ, ಎಂಟು ರಾಜ್ಯಗಳು ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳೊಂದಿಗೆ ಸಹಕರಿಸಲು ಉತ್ಸುಕವಾಗಿವೆ.
ಈ ವಿಷಯವನ್ನು ಮುಂಬರುವ ಜಿಎಸ್ಟಿ ಮಂಡಳಿಯ ಸಭೆಯ ಕಾರ್ಯಕಲಾಪದಲ್ಲಿ ಸೇರಿಸಲು ಮತ್ತು ಇತರೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರವು ಈ ಪ್ರಸ್ತಾವನೆಗೆ ಬೆಂಬಲ ನೀಡುವಂತೆ ಕೋರಲು ಸಭೆಯಲ್ಲಿ ಜಂಟಿಯಾಗಿ ತೀರ್ಮಾನಿಸಲಾಯಿತು.
ಹಿನ್ನೆಲೆ:
ದೇಶಾದ್ಯಂತ ಏಕೀಕೃತ ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಪ್ರಾರಂಭಿಸುವ ಉದ್ದೇಶದಿಂದ, ಗಮ್ಯಸ್ಥಾನ ಆಧಾರಿತ ತೆರಿಗೆಯಾಗಿ ಜುಲೈ 2017 ರಲ್ಲಿ ಜಿ.ಎಸ್.ಟಿ.ಯನ್ನು ಜಾರಿಗೆ ತರಲಾಯಿತು. ಆದಾಯ ತಟಸ್ಥತೆಯ ತತ್ವವು ಈ ವಿನ್ಯಾಸದ ಕೇಂದ್ರ ಬಿಂದುವಾಗಿತ್ತು. ಐದು ವರ್ಷಗಳ ಅವಧಿಗೆ ಯಾವುದೇ ಆದಾಯದ ಕೊರತೆಯ ಎದುರು ರಾಜ್ಯಗಳಿಗೆ ಆದಾಯ ರಕ್ಷಣೆಯನ್ನು ಖಾತರಿಪಡಿಸಲು ಜಿ.ಎಸ್.ಟಿ. (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017 ಅನ್ನು ಜಾರಿಗೆ ತರಲಾಯಿತು. ರಾಜ್ಯಗಳ ಹಣಕಾಸಿನ ಅಧಿಕಾರಗಳನ್ನು ಗಮನಾರ್ಹವಾಗಿ ಜಿ.ಎಸ್.ಟಿ.ಯು ತನ್ನೊಳಗೆ ವಿಲೀನಗೊಳಿಸಿಕೊಳ್ಳುತ್ತದೆ ಮತ್ತು ಸಹಕಾರಿ ಒಕ್ಕೂಟವನ್ನು ಸಂರಕ್ಷಿಸಲು ಪರಿಹಾರ ಕಾರ್ಯವಿಧಾನವು ಅತ್ಯಗತ್ಯವಾಗಿ ಬೇಕಾಗುತ್ತದೆ ಎಂಬ ಅಂಶವು ಆಗಲೇ ಸ್ಪಷ್ಟವಾಗಿತ್ತು.
ಜುಲೈ 2017 ರಲ್ಲಿ ಜಾರಿಯಾದಾಗಿನಿಂದ ಜಿ.ಎಸ್.ಟಿ.ಯಲ್ಲಿ ಹಲವಾರು ಬಾರಿ ದರಗಳ ತರ್ಕಬದ್ಧ ಗೊಳಿಸುವಿಕೆಯಾಗಿರುತ್ತದೆ. ಕೇಂದ್ರ ಸರ್ಕಾರದ ಈಗಿನ ಪ್ರಸ್ತಾವನೆಯು ದರ ಹಂತಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಮತ್ತು ಹಲವು ಬಾಬ್ತುಗಳನ್ನು ಕೆಳಹಂತಗಳಿಗೆ ತರುವ ಪ್ರಕ್ರಿಯೆಗೆ ಸಂಬಂಧಿಸಿದ್ದು ಒಟ್ಟಾರೆ ಜಿ.ಎಸ್.ಟಿ. ದರಗಳ ಸಂರಚನೆಯನ್ನು ಸರಳೀಕರಿಸುವುದಕ್ಕೆ ಸಂಬಂಧಿಸಿರುತ್ತದೆ. ದಕ್ಷತಾ ಸುಧಾರಣೆ ಮತ್ತು ಹೆಚ್ಚುವರಿ ಬಳಕೆಯಿಂದಾಗಿ, ಅಂತಹ ತರ್ಕಬದ್ಧಗೊಳಿಸುವಿಕೆ ಗಳುಗುರುತರವಾದ ಮಧ್ಯಮಾವಧಿ ಮತ್ತು ದೀರ್ಘಾವಧಿ ರಾಜಸ್ವ ಆದಾಯವನ್ನು ತರುತ್ತವೆ ಎಂಬ ನಿರೀಕ್ಷೆಯ ಮೇಲೆ ಯಾವಾಗಲೂ ಆಧಾರವಾಗಿರುತ್ತವೆ.
ಆದರೆ, ಇಲ್ಲಿಯವರೆಗಿನ ಪ್ರತಿಯೊಂದು ಸುತ್ತಿನ ತರ್ಕಬದ್ಧಗೊಳಿಸುವಿಕೆಯು ಈ ಆದಾಯ ನಷ್ಟಗಳನ್ನು ಸರಿದೂಗಿಸಲು ನಿರೀಕ್ಷಿಸಲಾದ ಪ್ಲವನತೆಯು (buoyancy) ಕಾರ್ಯರೂಪಕ್ಕೆ ಬಂದಿಲ್ಲವಾದ್ದರಿಂದ ರಾಜ್ಯದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದರಗಳ ತರ್ಕಬದ್ಧಗೊಳಿಸುವಿಕೆಯಿಂದಾಗಿ ಆರ್ಥಿಕ ವರ್ಷ 2018 ಮತ್ತು 2024ರ ನಡುವೆ ನಿವ್ವಳ ಪರಿಣಾಮಕಾರಿ ಜಿ.ಎಸ್.ಟಿ. ದರವು ಶೇ.14.4 ರಿಂದ ಶೇ.11.6ಕ್ಕೆ ಕುಸಿದಿದೆ ಎಂಬುದಾಗಿ ಅಂದಾಜಿಸಲಾಗಿದೆ. ಗಮನಾರ್ಹವಾಗಿ, ಜಿ.ಎಸ್.ಟಿ. ಆದಾಯ (ಮರುಪಾವತಿ ನಂತರದ) ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ, ಜಿ.ಎಸ್.ಟಿ. ಪೂರ್ವ ಯುಗದಲ್ಲಿ ದಾಖಲಾದ ಮಟ್ಟವನ್ನು ಇನ್ನೂ ಮೀರಿಲ್ಲ. ಈಗಿನ ಪ್ರಸ್ತಾವನೆಯಿಂದ ನಿವ್ವಳ ಪರಿಣಾಮಕಾರಿ ಜಿ.ಎಸ್.ಟಿ. ದರವು ಶೇ.10ರ ಮಿತಿಗಿಂತಲೂ ಕೆಳಗೆ ಕುಸಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಭವಿಷ್ಯದ ದರಗಳ ತರ್ಕಬದ್ಧಗೊಳಿಸುವಿಕೆಯು ಆದಾಯ ನಷ್ಟವನ್ನು ಸರಿದೂಗಿಸಲು ಅಗತ್ಯವಾದ ಪ್ಲವನತೆಯನ್ನು ಸ್ವಯಂಚಾಲಿತವಾಗಿ ನೀಡುತ್ತದೆ ಎಂದು ಊಹಿಸುವುದು ಸರಿಯಲ್ಲ.
ದರ ತರ್ಕಬದ್ಧಗೊಳಿಸುವಿಕೆ ಕುರಿತ ಯಾವುದೇ ಹೊಸ ಪ್ರಸ್ತಾಪವುಪ್ಲವನತೆಯು ಆದಾಯ ನಷ್ಟವನ್ನು ಎಷ್ಟರ ಮಟ್ಟಿಗೆ ಸರಿದೂಗಿಸಬಹುದು ಎಂಬುದರ ವಾಸ್ತವಿಕ ಮೌಲ್ಯಮಾಪನದಿಂದ ಅಳೆಯುವಂತಾಗಿರಬೇಕು. ದರ ತರ್ಕಬದ್ಧಗೊಳಿಸುವಿಕೆಯ ನಂತರ ಆದಾಯ ಕೊರತೆಯ ಸಾಧ್ಯತೆ ಗಣನೀಯವಾಗಿ ಹೆಚ್ಚುವುದರಿಂದ, ದರ ತರ್ಕಬದ್ಧಗೊಳಿಸುವಿಕೆಯ ಪ್ರಸ್ತಾಪಗಳು ರಾಜ್ಯಗಳ ಹಣಕಾಸಿನ ಹಿತಾಸಕ್ತಿಗಳನ್ನು ಕಾಪಾಡಲು ಸ್ಪಷ್ಟ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರಬೇಕು.
ರಾಜ್ಯಗಳಿಗಿರುವ ಆತಂಕದ ಅಂಶಗಳು:
ರಾಜ್ಯಗಳು ಜಿ.ಎಸ್.ಟಿ.ಯನ್ನೇ ತಮ್ಮ ಆದಾಯದ ಮೂಲ ಆಧಾರವಾಗಿ ಹೆಚ್ಚಾಗಿ ಅವಲಂಬಿಸಿವೆ. ಆದರೆ ಕೇಂದ್ರ ಸರ್ಕಾರದ ಸ್ಥಿತಿ ಹಾಗಲ್ಲ. ಅದಕ್ಕೆ ನೇರ ತೆರಿಗೆ, ಸಾರ್ವಜನಿಕ ಉದ್ದಿಮೆಗಳ ಡಿವಿಡೆಂಡ್ (ಲಾಭಾಂಶ), ಕಸ್ಟಮ್ಸ್ ಮತ್ತು ಅಬಕಾರಿ ಸುಂಕಗಳು, ಸೆಸ್ ಮತ್ತು ಸರಛಾರ್ಜ್ ತರಹದ ಹಲವು ಆದಾಯದ ಮೂಲಗಳಿವೆ. ಇದು ಆದಾಯದ ಅನಿಶ್ಚಿತತೆಯ ಸಮಯದಲ್ಲಿ ಪರಿಣಾಮಕಾರಿ ಪ್ರತಿ ಕ್ರಿಯಾತ್ಮಕ ಕ್ರಮವಾಗಿ ಕಾರ್ಯನಿರ್ವಹಿಸಬಹುದಾದ ಸಾಲಗಳನ್ನು ಹೆಚ್ಚಿಸುವ ಸಾಮಥ್ರ್ಯವನ್ನು ಹೊಂದಿದೆ. ಕೇಂದ್ರದ ಜಿಎಸ್ಟಿ ಸಂಗ್ರಹಗಳು ಅದರ ಸ್ವಂತ ತೆರಿಗೆ ಆದಾಯದ ಸುಮಾರು ಶೇಕಡ 28 ರವರೆಗೆ ಹೊಂದಿವೆ, ಆದರೆ ರಾಜ್ಯಗಳು ಜಿ.ಎಸ್.ಟಿ.ಯನ್ನು ಹೆಚ್ಚಾಗಿ ಅವಲಂಬಿಸಿವೆ— ಇದು ಅವುಗಳ ಸ್ವಂತ ತೆರಿಗೆ ಆದಾಯದ ಅರ್ಧದಷ್ಟು ಭಾಗವನ್ನು ಹೊಂದಿರಬಹುದು. ಆದ್ದರಿಂದ, ದರಗಳಲ್ಲಿ ಕಡಿತವು ರಾಜ್ಯಗಳ ಆದಾಯ ಸ್ವೀಕೃತಿಗಳಲ್ಲಿ ಮಹತ್ವದ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ ಮತ್ತು ಅವುಗಳ ಹಣಕಾಸು ಸ್ಥಿರತೆಯನ್ನು ಹದಗೆಡಿಸುತ್ತದೆ.
ಜಿಎಸ್.ಟಿ ದರ ತರ್ಕಬದ್ಧಗೊಳಿಸುವಿಕೆಯ ಜಾರಿ ಮತ್ತು ಪರಿಹಾರ ಸೆಸ್ನಲ್ಲಿಸುವುದರಿಂದ ಉಂಟಾಗಬಹುದಾದ ಆದಾಯ ನಷ್ಟದ ಅಂದಾಜನ್ನು ಭಾರತ ಸರ್ಕಾರ ನೀಡಿಲ್ಲ. ಹಲವು ಹಣಕಾಸು ಸಂಶೋಧನಾ ಕೇಂದ್ರಗಳು ನೀಡಿರುವ ಅಂದಾಜಿನ ಮಾಹಿತಿಯಂತೆ ಇದು ವಾರ್ಷಿಕವಾಗಿ ರೂ.85,000 ಕೋಟಿಗಳಿಂದ ರೂ.2,00,000 ಕೋಟಿಗಳಿಗೂ ಮೀರುತ್ತದೆ. ರಾಜ್ಯಗಳಿಗೆ ಅವುಗಳ ಹಣಕಾಸು ಯೋಜನೆ ಮತ್ತು ಆರ್ಥಿಕ ನಿಯಂತ್ರಣದ ಮೇಲೆ ಗಮನಾರ್ಹ ಅನಿಶ್ಚಿತತೆಯನ್ನು ಈ ಅಸ್ಪಷ್ಟತೆಯು ತಂದೊಡ್ಡಿದೆ.
Today, representatives from eight opposition-ruled states met in Delhi to deliberate upon the Union Government’s announcement regarding rationalisation of GST rates. Karnataka was represented at the meeting by our Revenue Minister, Shri @krishnabgowda.
— Siddaramaiah (@siddaramaiah) August 29, 2025
We are for rationalisation… pic.twitter.com/GLYMgLMRbQ