ದಾವಣಗೆರೆ: ದಾವಣಗೆರೆಯ ಮಟ್ಟಿಕಲ್ ನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳದಲ್ಲಿ ಅಳವಡಿಸಲಾಗಿದ್ದ ಆಕ್ಷೇಪಾರ್ಹ ಫ್ಲೆಕ್ಸ್ ತೆರವುಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಾಜಿ ಮಹಾರಾಜ್ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಫ್ಲೆಕ್ಸ್ ಗಣೇಶ ಮೂರ್ತಿ ಸ್ಥಳದಲ್ಲಿ ಅಳವಡಿಸಲಾಗಿತ್ತು. ಇದನ್ನು ತೆರವಿಗೆ ಮುಂದಾಗಿದ್ದ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದು ನಿನ್ನೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಫ್ಲೆಕ್ಸ್ ತೆರವಿಗೆ ಬಿಡಲ್ಲ ಎಂದು ಯುವಕರ ಗುಂಪು ಪಟ್ಟು ಹಿಡಿದಿತ್ತು.
ನಗರದ ವೀರ ಸಾವರ್ಕರ್ ಯುವಕರ ಸಂಘ ಮಟ್ಟಿಕಲ್ ನಲ್ಲಿ ಗಣೇಶ ಮೂರ್ತಿ ಪೆಂಡಾಲ್ ಬಳಿ ಇತಿಹಾಸದ ಮಹನೀಯರ ಬೃಹತ್ ಗಾತ್ರದ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ಇದರಲ್ಲಿ ಶಿವಾಜಿ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶದ ಫ್ಲೆಕ್ಸ್ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೋಮುಭಾವನೆ ಕೆರಳಿಸುವ ಫ್ಲೆಕ್ಸ್ ಇದಾಗಿದ್ದು, ಗಣೇಶೋತ್ಸವ ಸಂದರ್ಭದಲ್ಲಿ ಇದನ್ನು ತೆರವು ಮಾಡಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ರಾತ್ರಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಫ್ಲೆಕ್ಸ್ ತೆರವಿಗೆ ಮುಂದಾದ ವೇಳೆ ಯುವಕ ಸಂಘದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಯುವಕರ ಮನವೊಲಿಸಿ ಆಕ್ಷೇಪಾರ್ಹ ಫ್ಲೆಕ್ಸ್ ನ್ನು ಪೊಲೀಸರು ತೆರವುಗೊಳಿಸಿದ್ದು, ಈ ಸ್ಥಳದಲ್ಲಿ ಶಿವಾಜಿಯ ಬೃಹತ್ ಚಿತ್ರ ಅಳವಡಿಸಲಾಗಿದೆ.