ಬೆಳ್ತಂಗಡಿ: ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸುಜಾತಾ ಭಟ್ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.
ಬೆಂಗಳೂರಿನಿಂದ ಕಾರ್ ನಲ್ಲಿ ಬೆಳ್ತಂಗಡಿಗೆ ಆಗಮಿಸಿದ ಅವರು ಎಸ್ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಎಸ್ಐಟಿ ಕಚೇರಿಗೆ ಸುಜಾತಾ ಭಟ್ ಆಗಮಿಸಿದ್ದಾರೆ. ಇಂದು ಅವರು ವಿಚಾರಣೆ ಎದುರಿಸಲಿದ್ದಾರೆ.
ನನ್ನ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ಹೇಳಿಕೊಂಡಿದ್ದ ಸುಜಾತಾ ಭಟ್ ನಂತರ ನನಗೆ ಪುತ್ರಿಯೇ ಇಲ್ಲ ಎಂದು ತಿಳಿಸಿದ್ದರು. ಬಳಿಕ ತಮ್ಮ ಹೇಳಿಕೆಯನ್ನೇ ಬದಲಿಸಿದ್ದರು.
ಆಗಸ್ಟ್ 29ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಮೂರು ದಿನ ಮೊದಲೇ ವಿಚಾರಣೆಗೆ ಆಗಮಿಸಿದ್ದು, ಇದಕ್ಕೆ ಎಸ್ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸುಜಾತಾ ಭಟ್ ಕಟ್ಟು ಕತೆ ಕಟ್ಟಿರುವುದು ಗೊತ್ತಾಗಿದೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಆರಂಭಿಸಿ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿ ಅಗತ್ಯ ದಾಖಲೆಗಳೊಂದಿಗೆ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಯಾವುದೇ ಉತ್ತರ ನೀಡದ ಸುಜಾತಾ ಭಟ್ ಅನಾರೋಗ್ಯದ ನೆಪವೊಡ್ಡಿ ಆಗಸ್ಟ್ 29ರಂದು ವಿಚಾರಣೆಗೆ ಬರುವುದಾಗಿ ಹೇಳಿದ್ದರು. ಇದೀಗ ದಿಧೀರ್ ವಿಚಾರಣೆಗೆ ಆಗಮಿಸಿದ್ದಾರೆ.