ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟವನ್ನು ಸೆಪ್ಟೆಂಬರ್ 11 ಮತ್ತು 12 ರಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕ್ರೀಡಾ ಕೂಟದಲ್ಲಿ ಗುಂಪು ಆಟಗಳಾದ ವಾಲಿಬಾಲ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಹ್ಯಾಂಡ್ ಬಾಲ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಕಬ್ಬಡಿ, ನೆಟ್ ಬಾಲ್, ಖೋ-ಖೋ ಮತ್ತು ಹಾಕಿ, ವೈಯುಕ್ತಿಕ ಕ್ರೀಡೆಗಳಾದ ಅಥ್ಲೇಟಿಕ್ಸ್, ಟೆನ್ನಿಸ್, ಕುಸ್ತಿ, ಈಜು, ಟೇಬಲ್ ಟೆನ್ನಿಸ್, ಬಾಡ್ಮಿಂಟನ್ ಮತ್ತು ಯೋಗ ಹಾಗೂ ಆಯ್ಕೆ ಮಾಡಲಾಗುವ ಕ್ರೀಡೆಗಳಾದ ಆರ್ಚರಿ(ಬಿಲ್ಲುಗಾರಿಕೆ), ಫೆನ್ಸಿಂಗ್, ಜಿಮ್ನಾಸ್ಟಿಕ್, ಜೂಡೋ, ಭಾರ ಎತ್ತುವಿಕೆ, ವುಷು, ಬಾಕ್ಸಿಂಗ್ ಮತ್ತು ಟೆಕ್ವಾಂಡೋ ಕ್ರೀಡೆಗಳಿದ್ದು, ಭಾಗವಹಿಸಲು ಯಾವುದೇ ವಯೋಮಿತಿಯ ನಿರ್ಬಂಧವಿರುವುದಿಲ್ಲ ಹಾಗೂ ಎಲ್ಲಾ ವಯೋಮಿತಿಯುಳ್ಳ ಪುರುಷ ಮತ್ತು ಮಹಿಳೆಯರು ಭಾಗವಹಿಸಬಹುದಾಗಿರುತ್ತದೆ. ಈ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ, ಮೆಡಲ್ಸ್ ಮತ್ತು ಟ್ರೋಫಿ ನೀಡಲಾಗುವುದು, ವಿಭಾಗ ಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ನಿಯೋಜಿಸಲಾಗುವುದು.
ಅಥ್ಲಟಿಕ್ , ಟೆನ್ನಿಸ್, ಕುಸ್ತಿ, ಟೇಬಲ್ ಟೆನ್ನಿಸ್, ಬ್ಯಾಡ್ಮಿಂಟನ್, ವಾಲಿಬಾಲ್, ಬಾಸ್ಕೆಟ್ ಬಾಲ್, ಹ್ಯಾಂಡ್ ಬಾಲ್, ನೆಟ್ ಬಾಲ್, ಥ್ರೋಬಾಲ್, ಕಬ್ಬಡಿ, ಯೋಗ ಮತ್ತು ಫುಟ್ಬಾಲ್, ಆರ್ಚರಿ(ಬಿಲ್ಲುಗಾರಿಕೆ), ಭಾರ ಎತ್ತುವಿಕೆ, ಟೆಕ್ವಾಂಡೋ, ಫೆನ್ಸಿಂಗ್, ಜುಡೋ, ವುಷು ಮತ್ತು ಬಾಕ್ಸಿಂಗ್ ಕ್ರೀಡೆಗಳನ್ನು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಜಿಮ್ನಾಸ್ಟಿಕ್ ಕ್ರೀಡೆಯನ್ನು ಗೋಪಾಲನ್ ಸ್ಪೋಟ್ಸ್ ಸೆಂಟರ್, ವೈಟ್ ಫಿಲ್ಡ್ ನಲ್ಲಿ, ಈಜು ಸ್ಪರ್ಧೆಯನ್ನು ಕೆನ್ಸಿಂಗ್ ಟನ್ ಈಜುಕೋಳದಲ್ಲಿ, ಹಾಕಿ ಸ್ಪರ್ಧೆಯನ್ನು ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ, ಖೋ-ಖೋ ಮತ್ತು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಸರ್ಕಾರಿ ಕಲಾ ಕಾಲೇಜು ಆಟದ ಮೈದಾನ ಡಾ.ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಬಹುದಾಗಿದೆ. ರಕ್ಷಣೆ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ.
ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಸಂಸ್ಥೆ, ಸಂಘ ಮತ್ತು ಕಾಲೇಜುಗಳ ಬಾವುಟವನ್ನು ತರುವುದರ ಜೊತೆಗೆ ಅಂದು ನಡೆಯುವ ಉದ್ಘಾಟನಾ ಪಥ ಸಂಚಲನದಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಶಾಲಾ ಕಾಲೇಜಿನ ಗುರುತಿನ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ಅಧಿಕೃತ ಇರುವ ಇತರೆ ಗುರುತಿನ ಚೀಟಿಗಳನ್ನು ತರಬೇಕಾಗಿರುತ್ತದೆ.
ಪ್ರಸಕ್ತ ಸಾಲಿನಿಂದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ತಾಲ್ಲೂಕು, ಜಿಲ್ಲೆ ಮತ್ತು ವಿಭಾಗ ಮಟ್ಟದವರೆಗೆ ಮೊಬೈಲ್ ಆಪ್ / ವೆಬ್ https://dasaracmcup-2025.etrpindia.com/KA-SPORTS ಪೋರ್ಟಲ್ ನಲ್ಲಿ ಸೆಪ್ಟೆಂಬರ್ 8 ರೊಳಗಾಗಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ : 080-22239771 ಮತ್ತು ಮೊಬೈಲ್ ಸಂಖ್ಯೆ : 9480886545, 7204266766 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.