ಬೆಂಗಳೂರು: ತಹಶೀಲ್ದಾರ್ ಕೋರ್ಟ್ ನಲ್ಲಿನ ವ್ಯಾಜ್ಯ 90 ದಿನದಲ್ಲಿ ಇತ್ಯರ್ಥವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ರಾಜ್ಯದ ಎಲ್ಲಾ ತಹಶೀಲ್ದಾರ್ ಗಳೊಂಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು ತಹಶೀಲ್ದಾರ್ ನ್ಯಾಯಾಲಯಗಳಲ್ಲಿರುವ ತಕರಾರು ಅರ್ಜಿಗಳನ್ನು 90 ದಿನದೊಳಗೆ ಇತ್ಯರ್ಥಪಡಿಸಬೇಕು. ವ್ಯಾಜ್ಯ ವಿಲೇವಾರಿ ಮಾಡದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ತಹಶೀಲ್ದಾರ್ ನ್ಯಾಯಾಲಯಗಳ ತಕರಾರು ಅರ್ಜಿಗಳ ವಿಲೇವಾರಿ ಗಮನಾರ್ಹಹವಾಗಿ ಪ್ರಗತಿ ಕಂಡಿದೆ. ಈ ಹಿಂದೆ ಪ್ರಕರಣಗಳ ಇತ್ಯರ್ಥಕ್ಕೆ 212 ದಿನಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಅದನ್ನು 82 ದಿನಕ್ಕೆ ಇಳಿಕೆ ಮಾಡಲಾಗಿದೆ. ಆದರೆ, ಈ ತಕರಾರು ಅರ್ಜಿಗಳ ವಿಲೇವಾರಿ ಕಾರ್ಯ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ 90 ದಿನಗಳಲ್ಲಿ ವಿಲೇವಾರಿ ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.