ನವದೆಹಲಿ: ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರವಾಗಿ ಎಂ.ಎಲ್.ಸಿ, ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಘಟ್ಟದ ಮೇಲೆ ಹಾಗೂ ಕೆಳಗೆ ಇರುವ ಆರ್ ಎಸ್ ಎಸ್ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ ಎಂದು ಆರೋಪಿಸಿದರು.
ಧರ್ಮಸ್ಥಳ ವಿಚಾರದಲ್ಲಿ ಈ ಹಿಂದೆ ನಳೀನ್ ಕುಮಾರ್ ಕಟೀಲ್ ಹಾಗೂ ಶಾಸಕ ಸುನಿಲ್ ಕುಮಾರ್ ಹೇಳಿಕೆಗಳನ್ನು ನೋಡಿ. ಸೌಜನ್ಯ ಪ್ರಕರಣದಲ್ಲಿ ತನಿಖೆ ಆಗಬೇಕು ಎಂದು ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿದರು. ಎಸ್ ಐಟಿ ರಚಿಸಬೇಕು ಎಂದು ಹೇಳಿದರು. ಸರ್ಕಾರ ಕಾಲಮಿತಿಯೊಳಗೆ ತನಿಖೆ ಮುಗಿಸಬೇಕು. ಎಸ್ ಐಟಿ ಧರ್ಮಸ್ಥಳ ದೇವಾಲಯ ಅಥವಾ ದೇವಾಲಯದವನ್ನು ತನಿಖೆ ಮಾಡುತ್ತಿಲ್ಲ. ಬದಲಾಗಿ ಯಾರು ಈ ಬಗ್ಗೆ ಹೇಳಿಕೆ ನೋಡಿದ್ದಾರೋ ಮಾಸ್ಕ್ ಮ್ಯಾನ್ , ಸಮೀರ್ ಸೇರಿದಂತೆ ಹಲವರ ತನಿಖೆ ನಡೆಸುತ್ತಿದೆ ಎಂದರು.
ಧಾರ್ಮಿಕ ವಿಚಾರದಲ್ಲಿ ರಾಜಕೀಯಕ್ಕೆ ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಸಂಘದ ಇಬ್ಬರು ನಾಯಕರಿಂದ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ ಎಂದು ಕಿಡಿಕಾರಿದರು.