ತುಮಕೂರು: ಧರ್ಮಸ್ಥಳ ಪ್ರಕರಣದಲ್ಲಿ ಎಲ್ಲರೂ ಆರಂಭದಲ್ಲಿಯೇ ಎಡವಿದ್ದು, ತಲೆ ಬುರುಡೆ ಇಟ್ಟುಕೊಂಡು ಧರ್ಮಸ್ಥಳಕ್ಕೆ ಅಪಕೀರ್ತಿ ತರುವ ಪ್ರಯತ್ನ ನಡೆಸಲಾಯಿತು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಲ್ಲಿ ಏನನ್ನೂ ವಿಚಾರಣೆ ಮಾಡದೇ ತಲೆ ಬುರುಡೆ ಇಟ್ಟುಕೊಂಡು ಧರ್ಮಸ್ಥಳಕ್ಕೆ ಅಪಕೀರ್ತಿ ತರುವ ಪ್ರಯತ್ನ ನಡೆದಿದೆ. ಕೆಲವು ತನಿಖಾ ತಂಡಗಳು ವಿನಾಕಾರಣ ಈ ಪ್ರಕರಣವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದವು. ಕಂಡ ಕಂಡಲ್ಲಿ ಗುಂಡಿ ತೆಗೆಯುವ ಮೂಲಕ ಅಲ್ಲಿನ ನಿವಾಸಿಗಳಿಗೆ ತೊಂದರೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಸಾಮಾನ್ಯ ಜ್ಞಾನ ಬಳಸಿ ವಿಚಾರಣೆ ಮಾಡಿದ್ದರೆ ಇಷ್ಟೆಲ್ಲ ಅನಾಹುತ ಆಗುತ್ತಿರಲಿಲ್ಲ. ದೂರು ಕೊಡಲು ಬಂದವನ ಪೂರ್ವಪರ ವಿಚಾರಿಸಬೇಕಿತ್ತು. ಅದನ್ನು ಬಿಟ್ಟು ನ್ಯಾಯಾಧೀಶರ ಮುಂದೆ 164 ಸ್ಟೇಟ್ಮೆಂಟ್ ಮಾಡಿಕೊಂಡು ಎಸ್ಐಟಿ ರಚಿಸಿಕೊಂಡು ಇಷ್ಟು ರಾದ್ಧಾಂತ ಮಾಡಿದ್ದಾರೆ. ಆರಂಭದಲ್ಲಿ ತಲೆ ಬುರುಡೆ ತಂದವನನ್ನೇ ವಿಚಾರಣೆ ಮಾಡಬೇಕಿತ್ತು. ಮೊದಲೇ ಇದೆಲ್ಲ ಮಾಡಿದ್ದರೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.