ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದೆ. ಬಿಎಂಟಿಸಿ ಬಸ್ ಹರಿದು 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಸಮೀಪ ನಡೆದಿದೆ.
ತಂದೆಯ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಜಿಎಂ ಪಾಳ್ಯದ ನಿವಾಸಿಯಾಗಿರುವ ದೇವಸ್ಥಾನದ ಅರ್ಚಕ ದಿಲೀಪ್ ಕುಮಾರ್ ಪುತ್ರ ಶಬರೀಶ್(10) ಮೃತಪಟ್ಟ ಬಾಲಕ.
ಮಗನ ಜೊತೆಗೆ ದಿಲೀಪ್ ಕುಮಾರ್ ಕೆಆರ್ ಮಾರುಕಟ್ಟೆಗೆ ಬಂದಿದ್ದಾಗ ಘಟನೆ ನಡೆದಿದೆ. ಈ ವೇಳೆ ಬೈಕ್ ಗೆ ಬಸ್ ಟಚ್ ಆಗಿದ್ದರಿಂದ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಶಬರೀಶ್ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಬಾಲಕನ ಶವ ಇರಿಸಲಾಗಿದೆ. ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಜನ ಜಮಾವಣೆಗೊಂಡಿದ್ದಾರೆ. ಬಿಎಂಟಿಸಿ ಬಸ್ ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಲಸೂರು ಗೇಟ್ ಸಂಚಾರ ಠಾಣೆ ಎದುರು ಜನ ಜಮಾವಣೆಗೊಂಡಿರುವ ಮಾರ್ಕೆಟ್ ವ್ಯಾಪಾರಿಗಳು, ಸಂಘಟನೆ ಸದಸ್ಯರು ಕ್ರಮಕ್ಕೆ ಒತ್ತಾಯಿಸಿದ್ದಾರೆ.