ಶಿವಮೊಗ್ಗ: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ ಶಿಕ್ಷಕಿಗೆ ಮರಣದಂಡನೆ ವಿಧಿಸಲಾಗಿದೆ. ಭದ್ರಾವತಿ ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಶನಿವಾರ ತೀರ್ಪು ಪ್ರಕಟಿಸಿದ್ದಾರೆ.
ಭದ್ರಾವತಿ ತಾಲೂಕು ಅಂತರಗಂಗೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ಕೃಷ್ಣಮೂರ್ತಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಇವರಿಗೆ ಸಹಕಾರ ನೀಡಿದ ಶಿವರಾಜ್ ಎಂಬುವನಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
2016ರ ಜುಲೈ 7ರಂದು ಭದ್ರಾವತಿಯ ಜನ್ನಾಪುರದಲ್ಲಿ ಶಿಕ್ಷಕ ಇಮ್ತಿಯಾಜ್ ಅವರನ್ನು ಕೊಲೆ ಮಾಡಲಾಗಿತ್ತು. ಅವರ ಮೃತದೇಹವನ್ನು ಹಗ್ಗದಲ್ಲಿ ಕಟ್ಟಿ ಭದ್ರಾವತಿ ಹೊಸ ಸೇತುವೆಯ ಸಮೀಪ ಭದ್ರಾ ನದಿಯಲ್ಲಿ ಎಸೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಏನಿದು ಪ್ರಕರಣ..?
ಅಂತರಗಂಗೆಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ಲಕ್ಷ್ಮೀಯನ್ನು ಸೊರಬದ ಇಮ್ತಿಯಾಜ್ ಎಂಬ ಶಿಕ್ಷಕ ಕಲಬುರಗಿಯಲ್ಲಿ ಕೆಲಸ ಮಾಡುವಾಗ ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಇವರಿಗೆ ಒಂದು ಗಂಡು ಮಗು ಇದೆ. ನಂತರ ಇಮ್ತಿಯಾಜ್ ಸೊರಬದ ತೆಲಗುಂದ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದರು, ಭದ್ರಾವತಿಯ ಅಂತರಗಂಗೆಯಲ್ಲಿ ಶಿಕ್ಷಕಿಯಾಗಿ ಲಕ್ಷ್ಮಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಆಕೆ ಭದ್ರಾವತಿಯ ಜನ್ನಾಪುರದ ಎನ್‌ಟಿಬಿ ಕಚೇರಿ ಸಮೀಪದಲ್ಲಿ ಬಾಡಿಗೆಮನೆಯಲ್ಲಿ ವಾಸಮಾಡುತ್ತಿದ್ದಳು.
ಆಕೆಯ ಪತಿ ಇಮ್ತಿಯಾಜ್ ಆಗಾಗ ಸೊರಬದಿಂದ ಭದ್ರಾವತಿಗೆ ಬಂದು ಹೋಗುತ್ತಿದ್ದರು. ಲಕ್ಷ್ಮೀ ಮನೆಯ ಪಕ್ಕದಲ್ಲಿಯೇ ಬಾಲ್ಯದ ಗೆಳೆಯ ಕೃಷ್ಣಮೂರ್ತಿ ಮನೆಮಾಡಿಕೊಂಡಿದ್ದ. ಲಕ್ಷ್ಮೀ ಹಾಗೂ ಕೃಷ್ಣಮೂರ್ತಿ ನಡುವೆ ಹೆಚ್ಚಿನ ಸಲುಗೆ ಬೆಳೆದಿದ್ದು, ಇಮ್ತಿಯಾಜ್ ತನ್ನ ಪತ್ನಿಗೆ ಬುದ್ಧಿವಾದ ಹೇಳಿದ್ದ. ಈ ವಿಷಯ ಇಮ್ತಿಯಾಜ್ ಮನೆಯವರಿಗೂ ಸಹ ತಿಳಿದು ಆವರು ಸಹ ಲಕ್ಷ್ಮೀಗೆ ಬುದ್ದಿವಾದ ಹೇಳಿದ್ದರು.
2016ನೇ ವರ್ಷದ ಜುಲೈನಲ್ಲಿ ಇಮ್ತಿಯಾಜ್ ಪತ್ನಿ ಲಕ್ಷ್ಮೀಯನ್ನು ರಂಜಾನ್ ಹಬ್ಬಕ್ಕೆ ಕರೆತರುವುದಾಗಿ ಸೊರಬದ ತನ್ನ ಮನೆಯಲ್ಲಿ ತಿಳಿಸಿ ಭದ್ರಾವತಿಯ ಜನ್ನಾಪುರದಲ್ಲಿದ್ದ ತನ್ನ ಪತ್ನಿ ಲಕ್ಷ್ಮೀ ಮನೆಗೆ ಬಂದಿದ್ದ. ಆಗ ಆಕೆ ಕ್ರಷ್ಣಮೂರ್ತಿಯೊಂದಿಗೆ ಸಲುಗೆಯಿಂದಿರುವುದನ್ನು ನೋಡಿ ಜಗಳವಾಡಿದ್ದಾನೆ.
2016 ರ ಜುಲೈ 7 ರಂದು ರಾತ್ರಿ 7-30 ರ ಸಮಯದಲ್ಲಿ ಈ ಕುರಿತಂತೆ ಲಕ್ಷ್ಮೀಗೂ, ಇಮ್ತಿಯಾಜ್ ಗೂ ಜಗಳವಾಗಿದೆ. ಆಗ ಲಕ್ಷ್ಮೀ ತನ್ನ ಸ್ನೇಹಿತ ಕೃಷ್ಣಮೂರ್ತಿ ಜೊತೆ ಸೇರಿ ಇಮ್ತಿಯಾಜ್ ನನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾಳೆ. ನಂತರ ಮತ್ತೋರ್ವ ಆರೋಪಿ ಶಿವರಾಜ್ ಎಂಬಾತನ ನೆರವನ್ನು ಪಡೆದುಕೊಂಡು ಮೂವರೂ ಸೇರಿ ಇಮ್ತಿಯಾಜ್ ಮೃತದೇಹವನ್ನು ಭದ್ರಾ ನದಿಗೆ ಎಸೆದಿದ್ದಾರೆ.
ಇಮ್ತಿಯಾಜ್ ಸಹೋದರ ನ್ಯೂಟೌನ್ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಪೋಲಿಸರು ಲಕ್ಷ್ಮೀ, ಕೃಷ್ಣಮೂರ್ತಿ ಮತ್ತು ಶಿವರಾಜ್ ಅವರನ್ನು ಬಂಧಿಸಿ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯವು ಸಾಕ್ಷ್ಯ ವಿಚಾರಣೆ ನಡೆಸಿ ಆರೋಪ ಸಾಬೀತಾದ ಕಾರಣ 1ನೇ ಆರೋಪಿ ಲಕ್ಷ್ಮೀ ಹಾಗೂ 2 ನೇ ಆರೋಪಿ ಕೃಷ್ಣಮೂರ್ತಿಗೆ ಕೊಲೆ ಆರೋಪಕ್ಕೆ ಮರಣ ದಂಡನೆ ಶಿಕ್ಷೆಯನ್ನು ಹಾಗೂ 3ನೇ ಆರೋಪಿ ಶಿವರಾಜ್‌ಗೆ ಕೊಲೆ ಸಾಕ್ಷಿ ನಾಶಪಡಿಸಲು ಯತ್ನಿಸಿದ ಆರೋಪಕ್ಕೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾಯರ್ ಶನಿವಾರ ತೀರ್ಪು ನೀಡಿದ್ದಾರೆ..1 ಮತ್ತು 2 ನೇ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಜೊತೆಗೆ ಮತ್ತು 13 ಲಕ್ಷ ದಂಡವನ್ನ ವಿಧಿಸಿದ್ದು ಇದರಲ್ಲಿ 10 ಲಕ್ಷ ಹಣವನ್ನ ಮೃತನ ತಾಯಿಗೆ ಪರಿಹಾರವಾಗಿ ನೀಡಬೇಕು. ಉಳಿದ 3 ಲಕ್ಷ ಹಣವನ್ನ ದಂಡವಾಗಿ ಪಾವತಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ವಾದ ಮಂಡಿಸಿದ್ದರು.