ಮಡಿಕೇರಿ: ಅನನ್ಯಾ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಎಸ್ ಐಟಿ ಅಧಿಕಾರಿಗಳು ಒಂದೆಡೆ ತನಿಖೆ ಚುರುಕುಗೊಳಿಸಿದ್ದಾರೆ. ಅನನ್ಯಾ ಭಟ್ ನನ್ನ ಮಗಳು ಎಂದು ಹೇಳಿ ವಸಂತಿ ಎಂಬ ಮಹಿಳೆಯ ಫೋಟೋ ತೋರಿಸಿ ಗೊಂದಲ ಸೃಷ್ಟಿಸಿರುವ ಸುಜಾತಾ ಭಟ್ ಅಚರನ್ನು ಮತ್ತೊಂದೆಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ವಸಂತಿ ಸಹೋದರ ವಿಜಯ್, ವಸಂತಿ ಸಾವಿನ ಹಿಂದೆ ಸುಜಾತಾ ಭಟ್ ಕೈವಾಡವಿರುವ ಶಂಕೆ ಇದೆ. ವಸಂತಿ ಮದುವೆಯಾದ ಎರಡೇ ತಿಂಗಳಿಗೆ ಸಾವನ್ನಪ್ಪಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ವಸಂತಿಯದ್ದು ಅಸಹಜ ಸಾವು. ಈ ನಿಟ್ಟಿನಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಸಂತಿಯ ಚಿನ್ನಾಭರಣ, ಹಣ, ಬಟ್ಟೆ ಎಲ್ಲವೂ ಸುಜಾತಾ ಭಟ್ ಬಳಿ ಇದೆ. ವಸಂತಿ ಸಾವಿನ ಬಗ್ಗೆ ನಮಗೆ ಸಾಕಷ್ಟು ಅನುಮಾನಗಳಿವೆ. ಆಕೆ ಸಾವನ್ನಪ್ಪಿದ ಬಳಿಕ ಆಕೆಯ ಪತಿ ಯಾವುದೇ ದೂರು ಕೂಡ ದಾಖಲಿಸಿಲ್ಲ. ವಸಂತಿ ಸಾವನ್ನಪ್ಪಿದ ಬಳಿಕ ಸುಜಾತಾ ಭಟ್ ಮಡಿಕೇರಿಗೆ ಬಂದು ಡೆತ್ ಸರ್ಟಿಫಿಕೇಟ್ ನ್ನು ಪಡೆದುಕೊಂಡು ಹೋಗಿದ್ದಾಳೆ ಎಂಬ ಮಾಹಿತಿ ಇದೆ. ಅಲ್ಲದೇ ಈಗ ಅನನ್ಯಾ ಭಟ್ ನಾಪತ್ತೆ ಪ್ರಕರಣದಲ್ಲಿ ನನ್ನ ತಂಗಿ ವಸಂತಿ ಫೋಟೊ ತೋರಿಸಿ ಇದು ನನ್ನ ಮಗಳು ಅನನ್ಯಾ ಭಟ್ ಎಂದು ಸುಜಾತಾ ಭಟ್ ಸುಳ್ಳು ಹೇಳುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ವಸಂತಿ ಸಾವಿನ ಹಿಂದೆ ಸುಜಾತಾ ಭಟ್ ಕೈವಾಡವಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.