ಚಿತ್ರದುರ್ಗ: ಮಧ್ಯರಾತ್ರಿ 12:45ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ನಿವಾಸದಲ್ಲಿ ಇಡಿ ಅಧಿಕಾರಿಗಳ ದಾಳಿ ಅಂತ್ಯವಾಗಿದೆ.
ನಿನ್ನೆ ಮುಂಜಾನೆ 5 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಶಾಸಕ ವೀರೇಂದ್ರ ಪಪ್ಪಿ ಮತ್ತು ಅವರ ಸಹೋದರರ ಮನೆಯಿಂದ ಇಡಿ ಅಧಿಕಾರಿಗಳು ತೆರಳಿದ್ದಾರೆ.
ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಬಳಿಕ ಅವರ ಸಹೋದರ ಕೆ.ಸಿ. ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಇಡಿ ದಾಳಿಯ ಬಗ್ಗೆ ಕಾನೂನಿನಡಿ ಉತ್ತರ ನೀಡುತ್ತೇವೆ. ಕೆ.ಸಿ. ವೀರೇಂದ್ರ ಬೆಂಗಳೂರಿನಲ್ಲಿದ್ದು, ಇಡಿ ವಶಕ್ಕೆ ಪಡೆದಿಲ್ಲ. ನೋಟಿಸ್ ಕೊಟ್ಟಾಗ ಉತ್ತರ ನೀಡುತ್ತೇವೆ. ಇನ್ನು ನೋಟಿಸ್ ನೀಡಿಲ್ಲ. ಆಸ್ತಿ ದಾಖಲೆ ತೆಗೆದುಕೊಂಡು ಹೋಗಿದ್ದಾರೆ. ಅವರು ಯಾವ ದಾಖಲೆ ಕೇಳಿದರೂ ನಾವು ಕೊಡುತ್ತೇವೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಸಿಕ್ಕಿಂಗೆ ಹೋಗಿ ವೀರೇಂದ್ರ ವಿಚಾರಣೆ ಮಾಡಿದ್ದಾರೆ. ಅಲ್ಲಿ ಏನು ಆಗಿದೆ ಎಂದು ನಮಗೆ ಸ್ಪಷ್ಟವಾಗಿ ಗೊತ್ತಿಲ್ಲ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ ಎನ್ನುವ ಮಾಹಿತಿ ಇದೆ. ದಾಳಿಯ ಹಿಂದೆ ರಾಜಕಾರಣ ಇದೆ ಎಂದು ಹೇಳುವುದಿಲ್ಲ. ನಮಗೆ ಗೊತ್ತಿಲ್ಲ. ಇದುವರೆಗೆ ನಮಗೆ ಯಾರೂ ಸಹ ನೋಟಿಸ್ ನೀಡಿಲ್ಲ. ಇಡಿ ನೋಟಿಸ್ ಕೊಟ್ಟ ನಂತರ ಉತ್ತರ ನೀಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಸಹೋದರ ಕೆ.ಸಿ. ನಾಗರಾಜ್ ಹೇಳಿದ್ದಾರೆ.