BIG NEWS: ಬಿಜೆಪಿ-ಆರ್.ಎಸ್.ಎಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತ ಎಲ್ಲವೂ ಕಾಂಗ್ರೆಸ್. ನಾನೀಗ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಅದಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾ‌ನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿ, ನಾನು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಯಾವುದೇ ರೀತಿಯಲ್ಲೂ ಅವರ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ. ನಾನು ಅಪ್ಪಟ ಕಾಂಗ್ರೆಸ್ಸಿಗ. ಜನತಾದಳ, ಬಿಜೆಪಿ ಬಗ್ಗೆ ಸಂಶೋಧನೆ ಮಾಡುತ್ತಿರುತ್ತೇನೆ. ಅದೇ ರೀತಿ ಆರ್ ಎಸ್‌ ಎಸ್ ಬಗ್ಗೆಯೂ ತಿಳಿದುಕೊಂಡಿದ್ದೇನೆ ಎಂದರು.

ನಾನು ಪ್ರತಿಯೊಂದು ರಾಜಕೀಯ ಪಕ್ಷಗಳ ಬಗ್ಗೆಯೂ ನನ್ನದೇ ಆದ ಸಂಶೋಧನೆ ನಡೆಸಿದ್ದೇನೆ. ಆರ್ ಎಸ್‌‌ ಎಸ್ ರಾಜ್ಯದಲ್ಲಿ ಹೇಗೆ ತನ್ನ ಸಂಘಟನೆ ಕಟ್ಟಿತು ಎಂಬುದು ನನಗೆ ತಿಳಿದಿದೆ. ಆರ್‌ ಎಸ್ ಎಸ್ ಪ್ರತಿ ತಾಲ್ಲೂಕು, ಜಿಲ್ಲೆ ಸೇರಿದಂತೆ ಎಲ್ಲಾ ಕಡೆ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಸಾಕಷ್ಟು ಹಣ ಹೂಡಿಕೆ ಮಾಡುತ್ತಿದೆ. ಮಕ್ಕಳನ್ನು ತಲುಪುವ ಕೆಲಸ ಮಾಡುತ್ತಿದೆ ಎಂದರು.

ರಾಜಕೀಯವಾಗಿ ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ರಾಜಕೀಯ ವ್ಯಕ್ತಿಯಾದ ನಾನು ರಾಜಕೀಯ ಎದುರಾಳಿಗಳಲ್ಲಿ ಯಾರು ಸ್ನೇಹಿತರಿದ್ದಾರೆ, ಯಾರು ಶತ್ರುಗಳಿದ್ದಾರೆ ಎನ್ನುವುದನ್ನು ತಿಳಿಯಬೇಕಲ್ಲವೇ? ಆದ ಕಾರಣಕ್ಕೆ ಆರ್ ಎಸ್ ಎಸ್ ಇತಿಹಾಸ ತಿಳಿದುಕೊಂಡಿದ್ದೇನೆ ಎಂದರು.

ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳಲ್ಲಿ ಒಂದಷ್ಟು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನೂ ನಾವು ಗಮನಿಸಬೇಕಲ್ಲವೇ? ನೇರವಾಗಿ, ದಿಟ್ಟವಾಗಿ ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸಬೇಕು ಅದೇ ರೀತಿ ನಾವು ಮಾಡಿದ್ದೇವೆ ಎಂದು ಹೇಳಿದರು.

ನಿಮ್ಮಲ್ಲೂ (ಮಾಧ್ಯಮ) ಒಬ್ಬೊಬ್ಬರದು ಒಂದೊಂದು ಗುಣ. ಹಿಡಿಯಲು ಬಂದರೆ ಜಾರಿಕೊಳ್ಳುವ ಗುಣವಿದೆ. ಒಳ್ಳೆಯ ಗುಣವೂ ಇದೆ. ಅವನ್ನು ನಾವು ಗಮನಿಸಬೇಕಲ್ಲವೇ? ಎಂದು ಡಿಸಿಎಂ ಅವರು ಉದಾಹರಣೆ ಕೊಟ್ಟರು.

ಬಿಜೆಪಿಯವರು ಧರ್ಮಸ್ಥಳ ಯಾತ್ರೆ ಮಾಡುತ್ತಿರುವ ವಿಚಾರವಾಗಿ, ಬಿಜೆಪಿ ಒಂದು ಠುಸ್ ಗಿರಾಕಿ. ಅವರು ಮಾಡುತ್ತಿರುವುದು ರಾಜಕಾರಣ. ಹಿರಿಯ ಅಧಿಕಾರಿ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖಾ ತಂಡವು ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸುತ್ತಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read