ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ಸಚಿವರ ಗುಂಪು ಅನುಮೋದನೆ ನೀಡಿದೆ.
ಈಗ ಇರುವ 4 ಜಿಎಸ್‌ಟಿ ಸ್ಲ್ಯಾಬ್ ಗಳ ಬದಲಾಗಿ ಎರಡೇ ಸ್ಲ್ಯಾಬ್ ಗಳಿರುವ ಜಿಎಸ್‌ಟಿ ಜಾರಿಗೆ ಬರುವುದು ಖಚಿತವಾಗಿದೆ. ಪ್ರಸ್ತಾಪಿತ ವ್ಯವಸ್ಥೆಯ ಪ್ರಕಾರ ಶೇಕಡ 12ರ ಸ್ಲ್ಯಾಬ್ ನಲ್ಲಿರುವ ಶೇಕಡ 99 ರಷ್ಟು ಉತ್ಪನ್ನಗಳು ಶೇಕಡ 5ರ ಸ್ಲ್ಯಾಬ್ ಗೆ ಒಳಪಡಲಿವೆ. ಶೇಕಡ 28ರ ಸ್ಲ್ಯಾಬ್ ನಲ್ಲಿರುವ ಉತ್ಪನ್ನಗಳು ಶೇ. 18ರ ಸ್ಲ್ಯಾಬ್ ಗೆ ಒಳಪಡಲಿವೆ. ಅಪಾಯಕಾರಿ ಎನಿಸುವ ಉತ್ಪನ್ನಗಳಿಗೆ ಶೇಕಡ 40ರಷ್ಟು ತೆರಿಗೆ ವಿಧಿಸಲಾಗುವುದು.
ಶೇಕಡ 28ರ ಸ್ಲ್ಯಾಬ್ ನ ಉತ್ಪನ್ನಗಳಿಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವುದರಿಂದ ಬೈಕ್, ವಾಷಿಂಗ್ ಮೆಷಿನ್, ಕಾರು, ಮೊಬೈಲ್ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಶೇಕಡ 12ರ ಸ್ಲ್ಯಾಬ್ ಉತ್ಪನ್ನಗಳು ಶೇಕಡ 5ರ ಸ್ಲ್ಯಾಬ್ ವ್ಯವಸ್ಥೆಗೆ ಬರುವುದರಿಂದ ಬೆಣ್ಣೆ, ತುಪ್ಪ, ಕಂಪ್ಯೂಟರ್, ಹಣ್ಣಿನ ಜ್ಯೂಸ್ ಸೇರಿ ಹಲವು ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ಜಿಎಸ್‌ಟಿ ಸರಳೀಕರಣದಿಂದ ಜನಸಾಮಾನ್ಯರು, ರೈತರು, ಮಧ್ಯಮ ವರ್ಗದವರು, ಸಣ್ಣ ಉದ್ಯಮಿಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಶೇಕಡ 5, 12, 18 ಹಾಗೂ ಶೇಕಡ 28ರ ಸ್ಲ್ಯಾಬ್ ಗಳಲ್ಲಿ ಜಿಎಸ್‌ಟಿ ವಿಧಿಸಲಾಗುತ್ತಿದೆ. ಶೇ. 12 ಹಾಗೂ ಶೇಕಡ 28ರ ಸ್ಲ್ಯಾಬ್ ಗಳನ್ನು ತೆಗೆದು ಹಾಕಲಾಗುವುದು. ತಂಬಾಕು, ಆಲ್ಕೋಹಾಲ್, ತಂಪು ಪಾನೀಯ ಸೇರಿ 7 ಅಪಾಯಕಾರಿ ಉತ್ಪನ್ನಗಳಿಗೆ ಶೇಕಡ 40ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಹೇಳಲಾಗಿದೆ.