ನವದೆಹಲಿ: ಭಾರತ-ಪಾಕಿಸ್ತಾನ ಟಿ20 ಏಷ್ಯಾ ಕಪ್ ಕ್ರಿಕೆಟ್ ಗೆ ಸರ್ಕಾರ ಅನುಮತಿ ನೀಡಿದೆ. ಭಾರತ, ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ನೀಡಲಾಗಿದ್ದು, ಸೆಪ್ಟೆಂಬರ್ 14ರಂದು ಭಾರತ- ಪಾಕಿಸ್ತಾನ ದುಬೈನಲ್ಲಿ ಮುಖಾಮುಖಿಯಾಗಲಿವೆ.
ಪಹಾಲ್ಗಾಂ ಉಗ್ರರ ದಾಳಿಯ ಬಳಿಕ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಕ್ರಿಕೆಟ್ ಸೇರಿದಂತೆ ದ್ವಿಪಕ್ಷೀಯ ಕ್ರೀಡೆ ನಿಷೇಧ ಮುಂದುವರೆಯಲಿದೆ. ಉಭಯ ರಾಷ್ಟ್ರಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ಇರುವುದಿಲ್ಲ ಎಂದು ಹೇಳಲಾಗಿದೆ.
ಭಾರತ, ಪಾಕಿಸ್ತಾನ ನಡುವೆ 2012ರಲ್ಲಿ ಕ್ರಿಕೆಟ್ ಸರಣಿ ನಡೆದಿತ್ತು. ಭಾರತ, ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನ ಭಾರತಕ್ಕೆ ಆಗಮಿಸಲು ಒಪ್ಪಿಗೆ ಇರುವುದಿಲ್ಲ. ದ್ವಿವಿಪಕ್ಷೀಯ ಸರಣಿ ಅಮೆರಿಕದಲ್ಲಿ ನಡೆಸಿದರೂ ಭಾರತ ಆಡುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯದಿಂದ ಸ್ಪಷ್ಟನೆ ನೀಡಲಾಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವುದರಿಂದ ಭಾರತಕ್ಕೆ ಯಾವುದೇ ನಿರ್ಬಂಧವಿಲ್ಲ. ಏಷ್ಯಾ ಕಪ್‌ನಲ್ಲಿ ಸೆಪ್ಟೆಂಬರ್ 14 ಮತ್ತು ಬಹುಶಃ 21 ರಂದು ದುಬೈನಲ್ಲಿ ನಿಗದಿಯಾಗಿರುವ ಭಾರತ-ಪಾಕಿಸ್ತಾನದ ಪ್ರಮುಖ ಪಂದ್ಯಗಳು ನಡೆಯಲಿದ್ದು, ಸೆಪ್ಟೆಂಬರ್ 29 ರಂದು ಫೈನಲ್ ನಡೆಯಲಿದೆ.
2012–13ರ ಋತುವಿನಿಂದ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿಲ್ಲ. ಅಂದಿನಿಂದ, ಎರಡೂ ದೇಶಗಳ ಪುರುಷ ಮತ್ತು ಮಹಿಳಾ ತಂಡಗಳು ಬಹು-ರಾಷ್ಟ್ರಗಳ ಪಂದ್ಯಾವಳಿಗಳು ಮತ್ತು ಬಹು-ಕ್ರೀಡಾಕೂಟಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗಿವೆ.
ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತವು 2023 ರಲ್ಲಿ ಏಷ್ಯಾ ಕಪ್ ಮತ್ತು 2025 ರಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು. ನಂತರ ಈ ಪಂದ್ಯಾವಳಿಗಳನ್ನು ತಟಸ್ಥ ಸ್ಥಳಗಳಲ್ಲಿ ನಡೆಸಲಾಗುತ್ತಿತ್ತು.