BIG NEWS: ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್ ಗೆ ಅನುಮತಿ ನೀಡುವ ಮುನ್ನ ಗಣೇಶೋತ್ಸವ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಾವು ಶ್ರದ್ಧಾಭಕ್ತಿಯಿಂದ ಆಚರಿಸುವ ಗಣೇಶೋತ್ಸವದಿಂದ ಜಲಚರಗಳಿಗೆ ಮಾರಕವಾಗಬಾರದು. ಈ ನಿಟ್ಟಿನಲ್ಲಿ ಗಣೇಶೋತ್ಸವ ಸಮಿತಿಗಳು ಮತ್ತು ಸಾರ್ವಜನಿಕರು ಪಿಒಪಿ ಗಣಪತಿ ಮೂರ್ತಿಗಳನ್ನು ಖರೀದಿಸದೆ, ಪರಿಸರ ಸ್ನೇಹಿಯಾದ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪೂಜಿಸಿ, ವಿಸರ್ಜಿಸುವಂತೆ ಮನವಿ ಮಾಡಿದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಾರೆ. ಆ ಮೂರು ಜಿಲ್ಲೆಗಳಲ್ಲಿ ಸಾಧ್ಯವಾಗುವುದಾದರೆ ಉಳಿದ ಜಿಲ್ಲೆಗಳಲ್ಲಿ ಏಕೆ ಆಗುವುದಿಲ್ಲ? ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಪಿಒಪಿ ಗೌರಿ ಗಣೇಶ ಮೂರ್ತಿಗಳು ನೀರಲ್ಲಿ ಕರಗುವುದಿಲ್ಲ. ಜೊತೆಗೆ ವಿಷಕಾರಕ ಅಂಶಗಳನ್ನು ನೀರಿನಲ್ಲಿ ಸೇರಿಸುತ್ತವೆ. ಜೊತೆಗೆ ಅದಕ್ಕೆ ಲೇಪಿಸುವ ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳು ನೀರಲ್ಲಿ ಕರಗಿ ಜಲಚರಗಳ ಸಾವಿಗೆ ಕಾರಣವಾಗುತ್ತವೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಅನೇಕ ಪಟ್ಟಣ, ನಗರಗಳಲ್ಲಿ ಸಮುಚ್ಚಯಗಳಿವೆ. ಇವುಗಳಲ್ಲಿ ಸಂಘಗಳು ಇರುತ್ತವೆ. ಅವರಿಗೆ ಮನವಿ ಮಾಡಿ ಮಣ್ಣಿನ ಗಣಪ ಪೂಜಿಸುವಂತೆ ಎಲ್ಲರಿಗೂ ಸಂದೇಶ ಕಳಿಸುವಂತೆ ಮತ್ತು ಶಾಲಾ, ಕಾಲೇಜು ಮಕ್ಕಳಲ್ಲಿ ಪರಿಸರ ಸ್ನೇಹಿ ಗಣಪನ ಮೂರ್ತಿ ಪೂಜಿಸುವ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ ಎಂದರು.

ಇನ್ನು ಗಣೇಶೋತ್ಸವದ ಮೆರವಣಿಗೆಯಲ್ಲಿ ಪಟಾಕಿಯನ್ನೂ ಹಚ್ಚಲಾಗುತ್ತದೆ. ಸುಪ್ರೀಂಕೋರ್ಟ್ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿಸದಂತೆ ಮತ್ತು ರಾತ್ರಿ 8ರಿಂದ 10ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸುವಂತೆ ಆದೇಶ ನೀಡಿದ್ದು, ಎಲ್ಲರೂ ಈ ನಿಯಮ ಪಾಲಿಸಬೇಕು. ಪರಿಸರಕ್ಕೆ ಮಾರಕವಾದ ಪಟಾಕಿ ಬಳಸದೆ ಹಸಿರು ಪಟಾಕಿ ಸಿಡಿಸಬೇಕು ಎಂದು ಮನವಿ ಮಾಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read