ಬೆಂಗಳೂರು: ಕಟ್ಟಡ ಪರವಾನಗಿ ಪಡೆದುಕೊಂಡು ನಿರ್ಮಿಸಿದ ಕಡಿಮೆ ವಿಸ್ತೀರ್ಣದ ಕಟ್ಟಡಗಳಿಗೆ ಮಾತ್ರ ನಿರ್ಮಾಣ ಕಾರ್ಯಾರಂಭ ಪತ್ರ(ಸಿಸಿ), ಸ್ವಾಧಿನಾನುಭವ ಪತ್ರ(ಒಸಿ) ವಿನಾಯಿತಿ, ಕಾನೂನು ಬಾಹಿರ ಕಟ್ಟಡಗಳಿಗೆ ಶೇಕಡ 15ರಷ್ಟು ಉಲ್ಲಂಘನೆಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪದ ತೆರಿಗೆ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಗಿದೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಸುದೀರ್ಘ ಚರ್ಚೆ ಸದಸ್ಯರ ಸಲಹೆ ಪಡೆದ ನಂತರ ಕೆಲವು ಸ್ಪಷ್ಟನೆಗಳನ್ನು ನೀಡುವ ಮೂಲಕ ಅನುಮೋದಿಸುವಂತೆ ಕೋರಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಧ್ವನಿ ಮತದ ಮೂಲಕ ವಿಧೇಯಕ ಅಂಗೀಕಾರವಾಗಿದೆ ಎಂದು ಹೇಳಿದ್ದಾರೆ.
ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತಮಿಳುನಾಡು, ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯದಲ್ಲಿಯೂ ಮುಂದೆ ಮನೆ ನಿರ್ಮಿಸುವ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಸಿಸಿ, ಒಸಿ ವಿನಾಯಿತಿ ನೀಡಲಾಗುತ್ತದೆ, ಎಷ್ಟು ವಿಸ್ತೀರ್ಣ ಎನ್ನುವುದನ್ನು ನಿಯಮಾವಳಿ ರೂಪಿಸುವಾಗ ನಿರ್ಧರಿಸುತ್ತೇವೆ, ಕಟ್ಟಡ ಪರವಾನಿಗೆ ಪಡೆದು ನಿರ್ಮಾಣ ಮಾಡಿದ ಕಟ್ಟಡಗಳಿಗೆ ಮಾತ್ರ ಸಿಸಿ, ಒಸಿ ವಿನಾಯಿತಿ ಸಿಗುತ್ತದೆ ಎಂದು ಬೈರತಿ ಸುರೇಶ್ ತಿಳಿಸಿದ್ದಾರೆ.