ಬೆಂಗಳೂರು: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಸಿಂಧನೂರು ತಾಲೂಕಿನ ರೈತರ ಪಂಪ್ಸೆಟ್ ಗಳಿಗೆ ನಿರಂತರವಾಗಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಚಾರ್ಜ್ ತಿಳಿಸಿದ್ದಾರೆ.
ಕಾಂಗ್ರೆಸ್ ಬಸನಗೌಡ ಬಾದರ್ಲಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಭತ್ತದ ನಾಟಿ ಸಮಯದಲ್ಲಿ 10 ಗಂಟೆ ಕಾಲ ವಿದ್ಯುತ್ ಪೂರೈಸಲು ರೈತರು ಮನವಿ ಸಲ್ಲಿಸಿದಲ್ಲಿ ವಿದ್ಯುತ್ ನಿಗಮದವರೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು. ಪ್ರಸ್ತುತ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿನ ಸಿಂಧನೂರು ತಾಲೂಕಿನ ರೈತರ ಪಂಪ್ಸೆಟ್ ಗಳಿಗೆ ನಿರಂತರವಾಗಿ 7 ಗಂಟೆ 3 ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾಳಮ್ಮನಗರದ ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಕೆಲವು ಮನೆಗಳಿಗೆ ಪಂಚಾಯಿತಿಯಿಂದ ವಾಸ ದೃಢೀಕರಣ ಪತ್ರ ನೀಡಿದರೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಬಿಜೆಪಿ ಸದಸ್ಯ ಶಾಂತರಾಮ ಸಿದ್ದಿಯವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಜಾರ್ಜ್ ಹೇಳಿದ್ದಾರೆ.
ಕೆಲವು ಕಚ್ಚಾ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಮನವಿ ಬಂದಿವೆ. ಆದರೆ ಸಂಪರ್ಕ ನೀಡಲು ನಿಯಮದಂತೆ ಅಗತ್ಯ ದಾಖಲಾತಿ ಒದಗಿಸಿಲ್ಲ. ಜಮೀನಿನ ವಾರಸುದಾರರೆಂದು ಹೇಳಿಕೊಂಡವರು ಈ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದಂತೆ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.