ದಾವಣಗೆರೆ: ಬೀದಿ ನಾಯಿಗಳ ದಾಳಿಗೆ ಒಳಗಾಗಿ ರೇಬಿಸ್ ಕಾಯಿಲೆಯಿಂದ 4 ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ದಾವಣಗೆರೆ ನಗರದ ಶಾಸ್ತ್ರಿ ಲೇಔಟ್ ನಿವಾಸಿ ಮಹಮದ್ ಶಾಕಿರ್ ಅಲಿ, ಆತಿಯಾಖಾನಂ ಅವರ ದಂಪತಿಯ ಪುತ್ರಿ ಖಾದಿರಾಬಾನು(4) ಮೃತಪಟ್ಟ ಬಾಲಕಿ. ಬೀದಿ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಪೋಷಕರು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಂತರ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿತ್ತು.
ಒಂದು ತಿಂಗಳ ಹಿಂದೆ ಮತ್ತೆ ಅಸ್ವಸ್ಥಳಾಗಿದ್ದ ಸಂದರ್ಭದಲ್ಲಿ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗುಲಿರುವುದನ್ನು ತಿಳಿಸಿ ಚಿಕಿತ್ಸೆ ನೀಡಿದ್ದರು. ಐಸಿಯುನಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.