ಬೆಂಗಳೂರು: ಧರ್ಮಸ್ಥಳ ಪ್ರಕರಣ ವಿಧಾನಸಭೆಯಲ್ಲಿ ಗದ್ದಲ-ಗಲಾಟೆಗೆ ಕಾರಣವಾಗಿದ್ದು, ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ವಾಗ್ವಾದಕ್ಕೆ ವೇದಿಕೆಯಾಗಿದೆ. ಮಹೇಶ್ ತಿಮರೋಡಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ೨೮ ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿರುವ ವಿಚಾರ ಸದನದಲ್ಲಿ ಪ್ರತಿಧ್ವನಿಸಿದ್ದು, ಈ ಬಗ್ಗೆ ಸರ್ಕಾರ ಮೌನವಾಗಿರುವುದೇಕೆ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದ್ದಾರೆ.
ಮಹೇಶ್ ತಿಮರೋಡಿ ಆರೋಪದ ಬಗ್ಗೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಸಿಎಂ ಹಾಗೂ ಸರ್ಕಾರದ ವಿರುದ್ಧವೇ ಆತ ಕೊಲೆ ಆರೋಪ ಮಾಡುತ್ತಿದ್ದಾನೆ. ಈಗಾಗಲೇ ಮುಸುಕುಧಾರಿಯೊಬ್ಬ ನೂರಾರು ಶವ ಹೂತಿಟ್ಟ ಬಗ್ಗೆ ದೂರು ನೀಡಿದ್ದಕ್ಕೆ ಮಣ್ಣು ಅಗೆದು ಶೋಧ ನಡೆಸಲಾಗುತ್ತಿದೆ. ಈಗ ಇನ್ನೋರ್ವ ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡುತ್ತಿದ್ದಾನೆ. ಇಷ್ಟಾದರೂ ಸರ್ಕಾರ ಮೌನವಾಗಿರುವುದು ಯಾಕೆ? ನಾಳೆ ಯಾರು ಏನೇ ಹೇಳಿದರು ನೀವು ಅದನ್ನು ಮಾಡುತ್ತಾ ಹೋಗುತ್ತೀರಾ? ಗಂಭೀರ ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದು ಯಾಕೆ ಎಂದು ಗುಡುಗಿದರು.
ಇದೇ ವೇಳೆ ಶಾಸಕ ಸುನೀಲ್ ಕುಮಾರ್, ವ್ಯಕ್ತಿಯೊಬ್ಬ ಕೊಲೆ ಆರೋಪ ಮಾಡಿದರೂ ಮೌನವಾಗಿದ್ದೀರಾ ಎಂದರೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಂತೆ ಮೌನವಾಗಿಲ್ಲ ಎನ್ನುವುದಾದರೆ ಬಾಯಿಗೆ ಬಂದಂತೆ ಆರೋಪ ಮಾಡಿರುವ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಾವ್ಯಾರೂ ಮೌನಾಗಿ ಕುಳಿತಿಲ್ಲ. ತಕ್ಕ ಉತ್ತರವನ್ನು ನೀಡಲು ಸಜ್ಜಾಗಿದ್ದೇವೆ. ಕೆಲ ವಿಚಾರ ಬಂದಾಗ ನೀವು ಜೋರು ಜೋರು ಮಾತನಾಡುತ್ತೀರಿ. ನಮ್ಮನ್ನು ಹಾಗೂ ಸರ್ಕಾರವನ್ನು ಅಷ್ಟೊಂದು ದುರ್ಬಲ ಎಂದುಕೊಂಡಿದ್ದೀರಾ? ಎಂದು ಕಿಡಿಕಾರಿದರು.
ಸಿಎಂ ಹಾಗೂ ಸರ್ಕಾರದ ವಿರುದ್ಧ ಕೊಲೆ ಆರೋಪ ಮಾಡಿರುವ ಮಹೇಶ್ ತಿಮರೋಡಿ ವಿರುದ್ಧ ಕೇಸ್ ದಾಖಲಿಸಲಾಗುವುದು. ಯಾವುದೇ ಕ್ಷಣದಲ್ಲಾದರೂ ಆತನನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಳ್ಳಲಿ. ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣದ ಬಗ್ಗೆಯೂ ಸದನದಲ್ಲಿ ಉತ್ತರ ನೀಡುವುದಾಗಿ ತಿಳಿಸಿದರು.