ನವದೆಹಲಿ: ಹೆತ್ತ ತಾಯಿ ಮೇಲೆಯೇ ಪಾಪಿ ಪುತ್ರನೊಬ್ಬ ಎರಡು ಬಾರಿ ಅತ್ಯಾಚಾರವೆಸಗಿರುವ ಹೇಯ ಕೃತ್ಯ ನವದೆಹಲಿಯಲ್ಲಿ ನಡೆದಿದೆ.
39 ವರ್ಷದ ಎಂ.ಡಿ.ಫಿರೋಜ್ ಅಲಿಯಾಸ್ ಸುಹೇಲ್ ತಾಯಿ ಮೇಲೆಯೇ ಅತ್ಯಾಚಾರವೆಸಗಿರುವ ಕಾಮುಕ ಪುತ್ರ. ಸೌದಿ ಅರೇಬಿಯಾದಲ್ಲಿ ಪವಿತ್ರ ತೀರ್ಥಯಾತ್ರೆ ಮುಗಿಸಿ ಬಂದ ದಿನವೇ ತಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ ಕಾಮಪಿಪಾಸು.
ಸಂತ್ರಸ್ತೆ ತನ್ನ ಪತಿ ಹಾಗೂ 25 ವರ್ಷದ ಮಗಳೊಂದಿಗೆ ದೆಹಲಿಯ ಹೌಜ್ ಖಾಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ತಿಂಗಳು ಹಲವು ಬಾರಿ ತನ್ನ ಮಗ ತನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಸೌದಿ ಅರೇಬಿಯಾ ಯಾತ್ರೆಯಿಂದ ವಾಪಸ್ ಕರೆಸಿದ ಬಳಿಕ ಹೀನ ಕೃತ್ಯವೆಸಗಿದ್ದಾನೆ.
ಆರೋಪಿ ಪದವೀಧರ. ಆದರೆ ಪ್ರಸ್ತುತ ನಿರುದ್ಯೋಗಿ. ಸಂತ್ರಸ್ತೆ ತನ್ನ ಪತಿ, ಮಗಳು ಹಾಗೂ ಮಗನೊಂದಿಗೆ ದೆಹಲಿಯ ಹೌಜ್ ಖಾಜಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಹಿರಿಯ ಮಗಳು ವಿವಾಹವಾಗಿ ಸಮೀಪವೇ ತನ್ನ ಪತಿಯೊಂದಿಗೆ ವಾಸವಾಗಿದ್ದಾಳೆ.
ಸಂತ್ರಸ್ತೆ ಜುಲೈ 17ರಂದು ತನ್ನ ಪತಿ ಹಾಗೂ ಮಗಳೊಂದಿಗೆ ಸೌದಿ ಅರೇಬಿಯಾಕ್ಕೆ ತೀರ್ಥಯಾತ್ರೆಗೆ ತೆರಳಿದ್ದರು. ಪ್ರವಾಸದಲ್ಲಿದ್ದಾಗಲೇ ಆರೋಪಿ ಮಗ ತನ್ನ ತಂದೆಗೆ ಕರೆ ಮಾಡಿ ತಕ್ಷಣ ದೆಹಲಿಗೆ ವಾಪಸ್ ಆಗುವಂತೆ ಹಾಗೂ ತಾಯಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ. ತಾನು ಚಿಕ್ಕಂದಿನಲ್ಲಿದ್ದಾಗ ಆಕೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾನೆ. ಆಗಸ್ಟ್ 1ರಂದು ಕುಟುಂಬ ದೆಹಲಿಗೆ ಹಿಂತಿರುಗಿದೆ. ಅಂದೇ ತನ್ನ ತಾಯಿಯನ್ನು ಕೋಣೆಯಲಿ ಕೂಡಿ ಹಾಕಿದ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಘಟನೆ ಬಳಿಕ ತಾಯಿ ಮನೆಬಿಟ್ಟು ತನ್ನ ಹಿರಿಯ ಮಗಳ ಮನೆಗೆ ತೆರಳಿ ಅಲ್ಲಿ ವಾಸವಾಗಿದ್ದರು. ಆಗಸ್ಟ್ 11ರಂದು ಮನೆಗೆ ವಾಪಸ್ ಆದಾಗಲೂ ಆಕೆ ಮೇಲೆ ಮತ್ತೆ ದೌರ್ಜನ್ಯ ನಡೆದಿದೆ.
ತಾಯಿ ಜೊತೆ ತಾನು ಮಾತನಾಡಬೇಕು ಎಂದು ಕೋಣೆಗೆ ಕರೆದೊಯ್ದು ಹಲವು ವರ್ಷಗಳ ಹಿಂದೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ವಿಧಿಸುತ್ತಿರುವ ಶಿಕ್ಷೆ ಎಂದು ಹೇಳಿ ಮತ್ತೆ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.