ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವ್ಹೀಕೆಂಡ್ ಮೂಡ್ ನಲ್ಲಿ ಶಾಪಿಂಗ್ ಎಂದು ಹೊರ ಹೋಗಿದ್ದವರಿಗೆ ಮಳೆರಾಯ ತಣ್ಣಿರೆರಚಿದ್ದಾನೆ.
ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದಲೂ ದಟ್ಟವಾದ ಮೋಡಕವಿದ ವಾತಾವರಣವಿತ್ತು, ಅಲ್ಲಲ್ಲಿ ಮಳೆಯಾಗುತ್ತಿತ್ತು. ಮಧ್ಯಾಹ್ನವಾಗುತ್ತಿದ್ದಂತೆ ಭಾರಿ ಮಳೆ ಅಬ್ಬರಿಸಿದ್ದು, ನೋಡ ನೋಡುತ್ತಿದ್ದಂತೆ ರಸ್ತೆಗಳು ನದಿಯಂತಾಗಿವೆ. ಗುಂಡಿಮಯ ರಸ್ತೆಗಳು ಜಲಾವೃತಗೊಂಡಿದ್ದು ಅವಾಂತರ ಸೃಷ್ಟಿಯಾಗಿವೆ.
ಮೆಜೆಸ್ಟಿಕ್, ವಿಧಾನಸೌಧ, ಶಾಂತಿ ನಗರ, ಕೆ.ಆರ್. ಮಾರುಕಟ್ಟೆ, ರಿಚ್ಮಂಡ್ ವೃತ್ತ, ಎಂ.ಜಿ.ರೋಡ್, ಕಸ್ತೂರಬಾ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಗಿರಿನಗರ, ಆರ್.ಆರ್.ನಗರ, ಮೈಸೂರು ರಸ್ತೆ, ನಯಂಡಹಳ್ಳಿ, ಕೆಂಗೇರಿ ಸೇರಿದಂತೆ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ವಾಹನ ವಸಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಅವಾಂತರದ ನಡುವೆ ಹಲವೆಡೆ ವಿದ್ಯುತ್ ವ್ಯತ್ಯಯವುಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.