ಚಾಮರಾಜನಗರ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಸದನದಲ್ಲಿಯೇ ಉತ್ತರ ನೀಡುತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ಕೂಡ ರಾಜಕೀಯ ಮಾಡಬಾರದು. ಎಸ್ ಐಟಿ ತನಿಖೆ ನಡೆಸುತ್ತಿದೆ. ಈ ವಿಚಾರವಾಗಿ ನಾವ್ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ನಾನು ಕೂಡ ಪದೇ ಪದೇ ಹೇಳುತ್ತಿದ್ದೇನೆ. ತನಿಖೆ ನಡೆಸುತ್ತಿದ್ದಾಗ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.
ಧರ್ಮಸ್ಥಳ ಪ್ರಕರಣ ಸಂಬಂಧ ಮಧ್ಯಂತರ ವರದಿ ಕೊಡಬೇಕೇ? ಅಥವಾ ಸಂಪೂರ್ಣ ತನಿಖೆ ಬಳಿಕ ವರದಿ ಕೊಡಬೇಕೇ ಎಂಬುದನ್ನು ಎಸ್ ಐಟಿಯವರೇ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ನಾವ್ಯಾರೂ ಮಧ್ಯಪ್ರವೇಶ ಮಾಡಲ್ಲ ಎಂದರು. ಬಿಜೆಪಿಯವರು ರಾಜಕೀಯ ದೃಷ್ಟಿಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಲ್ಲಿ ಧಾರ್ಮಿಕ ವಿಚಾರವಾಗಿ ಚರ್ಚೆಯಲ್ಲ. ಒಬ್ಬ ವ್ಯಕ್ತಿ ದೂರು ನೀಡಿದಾಗ ತನಿಖೆ ನಡೆಸಾಗುತ್ತದೆ. ಅದೇ ರೀತಿ ಎಸ್ ಐಟಿ ತನಿಖೆ ನಡೆಸುತ್ತಿದೆ. ತನಿಖೆ ನಡೆಸಿದ ಬಳಿಕ ಸತ್ಯಾಸತ್ಯತೆ ಏನೆಂಬುದು ಹೊರಬರಲಿದೆ ಎಂದು ಹೇಳಿದರು.