ಚಿತ್ರದುರ್ಗ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದೆಲ್ಲವೂ ನಗರ ನಕ್ಸಲರ ಕೈವಾಡ. ಷಡ್ಯಂತ್ರದ ಹಿಂದಿರುವವರು ಯಾರು? ಎಂಬುದನ್ನು ಸರ್ಕಾರ ಬಹಿರಂಗ ಪಡಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಧರ್ಮಸ್ಥಳದ ವಿಚಾರವಾಗಿ ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಯಾರು ಷಡ್ಯಂತ್ರ ನಡೆಸಿದವರು ಎಂಬುದನ್ನು ಬಹಿರಂಗಪಡಿಸಬೇಕು. ಮೊದಲು ಎಸ್ ಐಟಿ ಅಧಿಕಾರಿಗಳು ಮಧ್ಯಂತರ ವರದಿ ಬಿಡುಗಡೆ ಮಾಡಲಿ ಎಂದರು.
ಎಲಾ ಷಡ್ಯಂತ್ರಗಳ ಹಿಂದೆ ನಗರ ನಕ್ಸಲರು ಇದ್ದಾರೆ. ನಗರ ನಕ್ಸಲರು ಸಿಎಂ ಸಿದ್ದರಾಮಯ್ಯ ಅವರ ಸುತ್ತುವರೆದು ಈ ತನಿಖೆ ನಡೆಸಿದ್ದಾರೆ. ಮುಸುಕುಧಾರಿ ದೂರುದಾರ ಸರ್ಕಾರಕ್ಕೆ ಮುಸುಕು ಹಾಕಿದ್ದಾನೆ. ಈಗೇನು ಬಂತು ಬೆಟ್ಟ ಅಗೆದು ಇಲಿಯೂ ಸಿಗಲಿಲ್ಲ. ಮುಸುಕುಧಾರಿ ಇನ್ನೂ ನೂರು ಕಡೆ ತೋರಿಸಲು ಹೊರಟಿದ್ದಾನೆ. ಕಡೆಗೆ ಮಂಜುನಾಥನ ಕೆಳಗೆ ಹೂತಿದ್ದೇನೆ ಎನ್ನುವಂಥದ್ದೂ ನಡೆಯುತ್ತಿದೆ. ಹಿಂದೂಗಳನ್ನು ಇಷ್ಟೊಂದು ಕಡೆಗಣಿಸುವುದಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಮಸೀದಿಯಲ್ಲಿ ನೀವು ತನಿಖೆಗೆ ಹೋಗುತ್ತೀರಾ? ಮಸೀದಿಗಳ ಬಗ್ಗೆ ಆಪಾದನೆ ಬಂದರೆ ಈ ಸರ್ಕಾರ ಮುಟ್ಟಲೂ ಹೋಗಲ್ಲ. ಹಿಂದೂ ದೇವಸ್ಥಾನ ಅಂದರೆ ಸಲಿಕೆ, ಗುದ್ದಲಿ ಸಮೇತ ಹೋಗುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.