ಬೆಂಗಳೂರು: ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹೇಳಿಕೆ ನೀಡುವುದನ್ನು ಮುಂದುವರೆಸಿರುವ ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಅವರಿಗೆ ನೋಟಿಸ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರ, ಮತ್ತಿತರ ವಿಚಾರಗಳ ಬಗ್ಗೆ ಯಾರೂ ಮಾತನಾಡಬಾರದು, ಪಕ್ಷದ ಶಿಸ್ತು ಪಾಲಿಸಬೇಕು, ಅನಗತ್ಯ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು ಎಂದು ಈ ಹಿಂದೆಯೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದರೂ ಬಸವರಾಜ ಶಿವಗಂಗಾ ಮತ್ತೆ ಮತ್ತೆ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಅವರಿಗೆ ಸೂಚನೆ ನೀಡಿದ್ದು, ನೋಟಿಸ್ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.