Independence Day : ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನಮಾನಸದಲ್ಲಿ ಚಿರಸ್ಥಾಯಿ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದ್ದು ವಿಶೇಷವಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಈಸೂರಿನ ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿಯಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎ.ಮಧು ಬಂಗಾರಪ್ಪ ಸ್ಮರಿಸಿದರು.

ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದರು.

ಈ ಜಿಲ್ಲೆ ಅನೇಕ ಹೋರಾಟಗಾರರಿಗೆ ಜನ್ಮ ನೀಡಿದೆ, ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ನಮ್ಮ ತಂದೆಯವರಾದ ಎಸ್. ಬಂಗಾರಪ್ಪ ನವರು ಸೇರಿದಂತೆ ನಾಲ್ಕು ಮುಖ್ಯ ಮಂತ್ರಿಗಳನ್ನು ನೀಡಿದ ಹಾಗೂ ರಾಷ್ಟ್ರ ಕವಿಗಳಾದ ಕುವೆಂಪು, ಜಿ.ಎಸ್. ಶಿವರುದ್ರಪ್ಪ ಮತ್ತು ಸಮಾಜವಾದಿ ಹೋರಾಟಗಾರರಾದ ಶಾಂತವೇರಿ ಗೋಪಾಲಗೌಡ ಸೇರಿದಂತೆ ಅನೇಕರು ಜನಿಸಿದ ಪುಣ್ಯಭೂಮಿ.

ನಮ್ಮ ಸರ್ಕಾರವು ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಕಡಿಮೆ ಅವಧಿಯಲ್ಲಿ ಜಾರಿಗೊಳಿಸಿದೆ. ಗ್ಯಾರಂಟಿ ಯೋಜನೆಗಳುಯಶಸ್ವಿಯಾಗಿ ಜನರಿಗೆ ತಲುಪಿದ್ದು, ಜನರ ಜೀವನದಲ್ಲಿ ಸುಧಾರಣೆ ಕಾಣಬಹುದಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಅಂದಾಜು ರೂ.50,000ಕ್ಕೂ ಅಧಿಕ ಮೊತ್ತದ ಆರ್ಥಿಕ ಸೌಲಭ್ಯ ನೇರವಾಗಿ ದೊರೆಯುತ್ತಿದೆ.

ಗೃಹಲಕ್ಷ್ಮಿಯೋಜನೆಯಿಂದ ಜಿಲ್ಲೆಯ 3,87,638 ಫಲಾನುಭವಿಗಳಿಗೆ ರೂ. 1567.74 ಕೋಟಿಗಳನ್ನು ಡಿಬಿಟಿ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.

ಶಕ್ತಿ ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ 6.32 ಕೋಟಿ ಮಹಿಳಾ ಪ್ರಯಾಣಿಕರು ಇದುವರೆಗೆ ಪ್ರಯಾಣಿಸಿ, ಈ ಯೋಜನೆಯ ಲಾಭಪಡೆದಿದ್ದಾರೆ.ಅನ್ನಭಾಗ್ಯ ಯೋಜನೆಯಡಿ ಈ ವರೆಗೆ ಜಿಲ್ಲೆಯಲ್ಲಿ 3,52,840 ಲಕ್ಷ ಪಡಿತರ ಕಾರ್ಡುದಾರರಿಗೆ ರೂ. 359.97 ಕೋಟಿ ಹಣವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗಿದೆ.
ಈ ವರ್ಷದ ಫೆಬ್ರವರಿಯಿಂದ 10ಕೆಜಿ ಅಕ್ಕಿಯನ್ನು ಪಡಿತರ ಚೀಟಿದಾರರಿಗೆ ನೀಡಲಾಗುತ್ತಿದೆ.

ಗೃಹ ಜ್ಯೋತಿ ಯೋಜನೆಯಡಿ ಇದುವರೆವಿಗೂ 4.69 ಲಕ್ಷ ಕುಟುಂಬಗಳು ಸೌಲಭ್ಯ ಪಡೆಯುತ್ತಿದ್ದು, ಸರ್ಕಾರ ವಿದ್ಯುತ್ ಸಬ್ಸಿಡಿಗಾಗಿ ಮೊತ್ತ ರೂ. 481.04 ಕೋಟಿ ವೆಚ್ಚ ಮಾಡಲಾಗಿದೆ. ಶಿವಮೊಗ್ಗದಿಂದಲೇ ಯುವನಿಧಿ ಯೋಜನೆಗೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಚಾಲನೆ ನೀಡಿದರು.ಇದುವರೆವಿಗೂ ಈ ಯೋಜನೆಯಡಿ ಜಿಲ್ಲೆಯ 6894 ವಿದ್ಯಾರ್ಥಿಗಳಿಗೆ ರೂ.17.88 ಕೋಟಿಯನ್ನು ಅವರ ಖಾತೆಗಳಿಗೆ ಜಮಾಮಾಡಲಾಗಿದೆ.
ಈ ಬಾರಿ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಕೆರೆ, ಕಾಲುವೆಗಳಲ್ಲಿ ನೀರು ತುಂಬಿ, ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಇದರಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಜಿಲ್ಲೆಗೆ ನೂತನವಾಗಿ 5 ಪಶು ಚಿಕಿತ್ಸಾಲಯ ಕಟ್ಟಡಗಳನ್ನು ಮಂಜೂರು ಮಾಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ಮತ್ಸ್ಯ ಸಂಜೀವಿನಿ ಯೋಜನೆಯಡಿಯಲ್ಲಿ ಮಹಿಳಾ ಮೀನುಗಾರರಿಗೆ ಉಚಿತ ಮೀನು ಮರಿ ಮತ್ತು ಮೀನಿನ ಆಹಾರ ವಿತರಣೆ ಹಾಗೂ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದ ಮೀನುಗಾರರ ಕುಟುಂಬಗಳಿಗೆ 25 ಮನೆಗಳನ್ನು ಮಂಜೂರು ಮಾಡಲಾಗಿದೆ.

ಶಿರಾಳಕೊಪ್ಪ, ಅಮೃತ್ ಯೋಜನೆಯಡಿ ಶಿಕಾರಿಪುರ, ಹೊಳೆಹೊನ್ನೂರು, ಜೋಗ-ಕಾರ್ಗಲ್, ಹೊಸನಗರ, ತೀರ್ಥಹಳ್ಳಿ, ಆನವಟ್ಟಿ ಪಟ್ಟಣ ಪಂಚಾಯಿತಿ, ಪುರಸಭೆಗೆ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗೆ ಶೀಘ್ರುದಲ್ಲಿ ಚಾಲನೆ ದೊರೆಯಲಿದೆ.ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಸೊರಬ ಹಾಗೂ ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ನೂತನ ನೀರಾವರಿ ಯೋಜನೆ ಮಂಜೂರು ಮಾಡಲಾಗಿದ್ದು, ಒಟ್ಟಾರೆ ರೂ.307.80 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಕುಂಸಿ – ಗಾಜನೂರು ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ರೂ.125 ಕೋಟಿ ಅನುಮೊದನೆ ದೊರಕಿದ್ದು, ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.ಇತ್ತೀಚಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ 4ನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದೆ.

ಹಾಗೂ ಶಿಕ್ಷಣ ಇಲಾಖೆಯಲ್ಲಿ ಕಡಿಮೆ ಅಂಕ ಪಡೆದ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮೂರು ಪರಿಕ್ಷಾ ನೀತಿ (Three Exam Policy) ಜಾರಿಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳ್ಳದ ಎಲ್ಲಾ ವಿದ್ಯಾರ್ಥಿಗಳಿಗೆ 2ನೇ ಅಥವಾ 3ನೇ ಪರೀಕ್ಷೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


025-26ನೇ ಸಾಲಿನಲ್ಲಿ ಪ್ರಥಮ ಬಾರಿಗೆ ರಾಜ್ಯದ 5000 ಸರ್ಕಾರಿ ಶಾಲೆಗಳಲ್ಲಿ ಎಲ್ಜಿ & ಯುಕೆಜಿ ತರಗತಿಗಳು, 4000 ಸರ್ಕಾರಿ ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳನ್ನು ಹಾಗೂ ರಾಜ್ಯದಲ್ಲಿ 500 ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳಾಗಿ ಉನ್ನತೀಕರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಅಂದಾಜು 16000 ಶಿಕ್ಷಕರ ನೇಮಕಾತಿಗೆ ಕ್ರಮವಹಿಸಲಾಗುತ್ತಿದೆ.

ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿಜ್ಞಾನ ವಿಭಾಗದ 25000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಎನ್ಇಇಟಿ/ಜೆಇಇ/ಸಿಇಟಿ ತರಬೇತಿ ನೀಡಲಾಗುತ್ತಿದೆ. ಸದರಿ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು 2024-25ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯು ಐಐಟಿ ಖರಗುರ ಗೆ ಪ್ರವೇಶಾತಿ ಪಡೆದಿರುವುದು ಶಿಕ್ಷಣ ಸಚಿವನಾಗಿ ನನಗೆ ಹೆಮ್ಮಯ ವಿಷಯವಾಗಿದೆ ಎಂದರು.

ಶಿಕ್ಷಣ ಇಲಾಖೆಯಲ್ಲಿ ಒಂದೇ ಸೂರಿನಡಿಯಲ್ಲಿ ಎಲ್.ಕೆ.ಜಿ ಯಿಂದ ದ್ವಿತೀಯ ಪಿ.ಯು.ಸಿ ವರೆಗೂ ವಿದ್ಯಾಭ್ಯಾಸ ನೀಡುವ ಸಲುವಾಗಿ ಜಿಲ್ಲೆಯಲ್ಲಿ 11 ಕೆ.ಪಿ.ಎಸ್ ಶಾಲೆಗಳನ್ನು ನಡೆಸಲಾಗುತ್ತಿದೆ.ಜಿಲ್ಲೆಯ 17 ರಿಂದ 20 ಶಾಲೆಗಳನ್ನು ಕೆ.ಪಿ.ಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲು ಯೋಜಿಸಲಾಗಿದೆ.

ಜಿಲ್ಲೆಗೆ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ 02 ವಸತಿ ನಿಲಯಗಳನ್ನು ಘೋಷಿಸಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ದ್ವಿ-ಭಾಷಾ ಮಾಧ್ಯಮ ಶಾಲೆಗಳಿಗೆ ಗಣನೀಯವಾಗಿ ಬೇಡಿಕೆ ಹೆಚ್ಚಿದೆ. ಇದರ ಅನ್ವಯ, ಹಾಲಿ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 171 ದ್ವಿ-ಭಾಷಾ ಮಾಧ್ಯಮ ಶಾಲೆಗಳನ್ನು ತೆರೆಯಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಸರ್ಕಾರದ ಈ ನಿರ್ಧಾರದ ಫಲವಾಗಿ, ಹೆಚ್ಚಿನ ಸಂಖ್ಯೆಯ ಮಕ್ಕಳು ಸರ್ಕಾರಿ ಶಾಲೆಗಳ ಕಡೆಗೆ ಆಕರ್ಷಿತರಾಗಿದ್ದಾರೆ.
ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ, ವಿತರಣೆ ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ.

ಜಿಲ್ಲೆಯಲ್ಲಿ 2178 ಶಾಲೆಗಳಲ್ಲಿ ಬಿಸಿ ಊಟ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು ಒಟ್ಟು 1,32,682 ವಿದ್ಯಾರ್ಥಿಗಳು ಯೋಜನೆಯ ಅನುಕೂಲವನ್ನು ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ಒಟ್ಟಾರೆಯಾಗಿ 51,61,390 ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.ವಿದ್ಯಾರ್ಥಿಗಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸಲು 6 ದಿನಗಳು ಮೊಟ್ಟೆಯನ್ನು ನೀಡುತ್ತಿರುವುದರ ಜೊತೆಗೆ ಸರ್ಕಾರದ ಶೇಕಡ 25% ಅನುದಾನ ಹಾಗೂ ಸತ್ಯ ಸಾಯಿ ಸಂಸ್ಥೆಯ ಶೇಕಡ 75% ಅನುದಾನದೊಂದಿಗೆ ವಾರದ 05 ದಿನಗಳು ರಾಗಿ ಮಾಲ್ಟ್ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯ ಸರ್ಕಾರ ಗೃಹ ಆರೋಗ್ಯ ಯೋಜನೆಯಡಿ ‘ನಿಮ್ಮ ಮನೆಯ ಸಮೀಪ ಆರೋಗ್ಯ ಸೇವೆ’ ಧ್ಯೇಯದೊಂದಿಗೆ ಉಚಿತ ಚಿಕಿತ್ಸೆ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.ದೇಶದಲೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ‘ಅಂಧತ್ವ ಮುಕ್ತ ಶಿವಮೊಗ್ಗ” ಎಂಬ ಅಭಿಯಾನ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.
ಮೆಗ್ಗಾನ್ ಆಸ್ಪತ್ರೆಯನ್ನು ಉನ್ನತೀಕರಿಸುವುದಲ್ಲದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಯು ಪ್ರಗತಿಯಲ್ಲಿದೆ.

50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯುನಿಟ್ ಮತ್ತು ಸಮಗ್ರ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡ ಕಾಮಗಾರಿಗೆ ಶೀಘ್ರದಲಿ ಚಾಲನೆ ದೊರೆಯಲಿದೆ ಹಾಗೂ ಸಿಮ್ಸ್ ನಲ್ಲಿ ಪರಿಶಿಷ, ಜಾತಿ & ಪರಿಶಿಷ ಪಂಗಡ ವೈದ್ಯಕೀಯ ವಿದ್ಯಾರ್ಥಿಗಳಿಗೆ 100 ಹಾಸಿಗೆ ವಸತಿನಿಲಯದ ಕಟ್ಟಡ ಕಾಮಗಾರಿ ಪುಗತಿಯಲ್ಲಿದೆ.
ಮಹತ್ಮಾ ಗಾಂಧಿ ನಗರ ವಿಕಾಸ ಯೋಜನೆ ಹಂತ-2 ರಲ್ಲಿ ರೂ.117.50 ಕೋಟಿ ಅನುದಾನ ಜಿಲ್ಲೆಗೆ ಮಂಜೂರಾಗಿರುತ್ತದೆ. ಪಿಎಂಜಿಎಸ್ವೈ ಪುಗತಿ ಪಥ ಯೋಜನೆಯಡಿಯಲ್ಲಿ ಶಿವಮೊಗ್ಗ, ಜಿಲ್ಲೆಗೆ ಒಟ್ಟು 162ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲು ರೂ 118.08 ಕೋಟಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಅನುಮೋದನೆಯಾಗಿರುತ್ತದೆ.

ಜಿಲ್ಲೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೆ ಉಳಿದಿದ್ದ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸನ್ಮಾನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರ ಮಾರ್ಗದರ್ಶನದಲ್ಲಿ, ಸಮಸ್ಯೆಯ ಶೀಘ್ರ ಪರಿಹಾರಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಹಿರಿಯ ವಕೀಲರೊಬ್ಬರನ್ನು ನೇಮಿಸಲಾಗಿದೆ. ಅಂತೆಯೇ ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಸಂತ್ರಸ್ಥರ ಸಮೀಕ್ಷೆ ಕಾರ್ಯ ನಡೆದಿದ್ದು, ಸಂತ್ರಸ್ತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಬದ್ಧವಾಗಿದೆ ಎಂದರು.

ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಭದ್ರಾವತಿಯಲ್ಲಿ ನೂತನ ಕಾರ್ಮಿಕರ ಸಮುದಾಯ ಭವನ ಮತ್ತು ಶಿವಮೊಗ್ಗದ ಹೊರವಲಯ ಸಿದ್ಧಿಪುರದಲ್ಲಿ ವಸತಿ ಕಟ್ಟಡ ನಿರ್ಮಿಸಲಾಗಿದೆ. ಸೊರಬ ತಾಲ್ಲೂಕಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ನೀಡಲು ವಸತಿ ಶಾಲೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಜೋಗದಲ್ಲಿ ಕೋಟ್ಯಾಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಅತೀ ಶೀಘ್ರದಲ್ಲಿ ಉದ್ಘಾಟನೆ ನಡೆಯಲಿದೆ. ಹಾಗೂ ನೂತನ ಜಿಲ್ಲಾಡಳಿತ ಭವನ ನಿರ್ಮಾಣ, ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ಕಾಯ್ದೆ ಕುರಿತಾದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
21 ಕವಾಯಿತು ತುಕಡಿಗಳು ಶಿಸ್ತು ಮತ್ತು ಆಕರ್ಷಕ ಪಥ ಸಂಚಲನ ನಡೆಸಿದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಗೀತೆಗಳ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಡಿಎಆರ್ ಆರ್ ಪಿಅಐಸೋಮಶೇಖರ್ ಹೆಚ್ ಪಿ ಇವರು ಕವಾಯಿತು ಮುಖ್ಯ ದಂಡ ನಾಯಕರಾಗಿ ಕನ್ನಡದಲ್ಲಿ ಆದೇಶಗಳನ್ನು ನೀಡಿದರು.ಕಾರ್ಯಕ್ರಮದಲ್ಲಿ ಮುಜರಾಯಿ ಇಲಾಖೆಯಿಂದ ಸಾಂಕೇತಿಕವಾಗಿ 5 ಜನ ಅರ್ಚಕರಿಗೆ ತತ್ಸಿಕ್ ಹಣವನ್ನು ನೀಡಲಾಯಿತು.

ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 625 ಅಂಕ ಗಳಿಸಿದ 6 ಮಕ್ಕಳಿಗೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
8 ಜನ ಸರ್ಕಾರಿ ನೌಕಕರಿಗೆ ಸರ್ವೋತ್ತಮ ಪ್ರಶಸ್ತಿ ನೀಡಲಾಯಿತು.ಗೃಹ ಇಲಾಖೆಯ ವತಿಯಿಂದ ಸಿಎಂ ಪದಕ ಪಡೆದ ಗೃಹರಕ್ಷಕ ಎಸ್.ಟಿ ಆನಂದ್ ಅವರನ್ನು ಸನ್ಮಾನಿಸಲಾಯಿತು.

ಶಿಸ್ತಿನ ಕವಾಯಿತು ಪ್ರದರ್ಶಿಸಿದ ತುಕುಡಿಗಳಾದ ಎನ್ ಸಿಸಿ ಕಸ್ತೂರಬಾ ಬಾಲಿಕಾ ಪ್ರೌಢಶಾಲೆ ಪ್ರಥಮ, ಮೊರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆ ಗಾಜನೂರು ದ್ವಿತೀಯ ಹಾಗೂ ಕಸ್ತೂರಬಾ ಬಾಲಕಿಯರ ಪ್ರೌಢಶಾಲೆ ವಿಭಾಗದ ಭಾರತ ಸೇವಾದಳಕ್ಕೆ ತೃತೀಯ ಬಹುಮಾನ ಪಡೆಯಿತು.

ಅತ್ಯುತ್ತಮ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ಮಾಚೇನಹಳ್ಳಿಯ ಪೊಲೀಸ್ ಪಬ್ಲಿಕ್ ಶಾಲೆಗೆ ಪ್ರಥಮ,
ಗೋಪಾಳದ ನಂದನ ವಿದ್ಯಾ ಸಂಸ್ಥೆಗೆ ದ್ವಿತೀಯ, ಬಹುಮಾನ ಹಾಗೂ ಗೋಪಾಳದ ಅನನ್ಯ ಪ್ರೌಢಶಾಲೆಗೆ ತೃತೀಯ ಸ್ಥಾನ ಘೋಷಿಸಿ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನಸಭಾ ಶಾಸಕರಾದ ಎಸ್ ಎನ್ ಚನ್ನಬಸಪ್ಪ ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್, ಬಲ್ಕೀಶ್ ಬಾನು, ಡಾ.ಧನಂಜಯ ಸರ್ಜಿ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಮಹಾನಗರಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ, ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read