ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದಾಗ, “ಇದು ಧರ್ಮಸ್ಥಳದ ಪರ ಅಥವಾ ವಿರುದ್ಧದ ವಿಚಾರವಲ್ಲ. ಎಲ್ಲಾ ಪ್ರಕ್ರಿಯೆ ನ್ಯಾಯಬದ್ಧವಾಗಿ ನಡೆಯಬೇಕು. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಅಲ್ಲಿ ನಡೆದಿರುವ ಷಡ್ಯಂತ್ರ ಹೊರಬರಲಿದೆ ಎಂಬ ವಿಶ್ವಾಸ ನನ್ನದು. ಈ ಪ್ರಕರಣದ ವಿಚಾರವಾಗಿ ನಮ್ಮ ಗೃಹ ಸಚಿವರು ಅಧಿವೇಶನದಲ್ಲಿ ಉತ್ತರ ನೀಡುವ ಮೂಲಕ ರಾಜ್ಯದ ಮುಂದೆ ಸತ್ಯಾಂಶ ಇಡಲಿದ್ದಾರೆ ಎಂದು ತಿಳಿಸಿದರು.
ಷಡ್ಯಂತ್ರ ನಡೆದಿದೆಯೇ ಏನು ಎಂಬ ಬಗ್ಗೆ ಗೃಹ ಸಚಿವರೇ ವಿವರಿಸಲಿದ್ದಾರೆ. ಮುಖ್ಯಮಂತ್ರಿಗಳಿಗೂ ಈ ವಿಚಾರದಲ್ಲಿ ಬದ್ಧತೆ ಇದೆ. ಯಾರೂ ಕೂಡ ಸುಳ್ಳು, ಷಡ್ಯಂತ್ರ ಮೂಲಕ ಅಪಮಾನ, ಅಪಪ್ರಚಾರ ನಡೆಸುವಂತಿಲ್ಲ ಎಂದು ಸಿಎಂ ನಮಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ನಾವು ಅದನ್ನು ಕಾಪಾಡಬೇಕು. ಇಲ್ಲಿ ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅನಗತ್ಯವಾಗಿ ಯಾರ ತೇಜೋವಧೆ ಮಾಡುವಂತಿಲ್ಲ ಎಂದು ಹೇಳಿದರು.