ಶ್ರೀನಗರ: ಉತ್ತರಾಖಂಡದ ಉತ್ತರ ಕಾಶಿ ಬಳಿಕ ಇದೀಗ ಜಮ್ಮು-ಕಾಶ್ಮೀರ ಕಿಶ್ತ್ವಾರ್ ನಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಯೋಧರು ಸೇರಿ 40 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮುಚೈಲ್ ಮಾತಾ ದೇವಾಲಯದ ಬಳಿಯ ಚಶೋತಿಯಲ್ಲಿ ಮೇಘಸ್ಫೋಟ ಸಂಭವಿಸಿ ಈ ದುರಂತ ಸಂಭವಿಸಿದೆ. ಇದರಿಂದಾಗಿ ಅಪಾರಪ್ರಮಾಣದ ಸಾವು-ನೋವು ಹಾನಿಯುಂಟಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ತಂಡಗಳು ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಇಬ್ಬರು ಯೋಧರ ಮೃತದೇಹವನ್ನು ರಕ್ಷಣಾ ತಂಡ ಹೊರತೆಗೆದಿದೆ. 50 ಜನರನ್ನು ರಕ್ಷಿಸಲಾಗಿದೆ. 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ.
ಚಶೋತಿ ಗ್ರಾಮದಲ್ಲಿರುವ ಮಚೈಲ್ ಮಾತಾ ದೇವಸ್ಥಾನದ ಲಂಗರ್ ನಲ್ಲಿ ಭಕ್ತರು ಊಟ ಮಾಡುತ್ತಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ಭಾರಿ ಶಬ್ಧಗಳೊಂದಿಗೆ ಏಕಾಏಕಿ ಮೇಘಸ್ಫೋಟ ಸಂಭವಿಸಿ ಭೂಕುಸಿತವುಂಟಾಗಿದೆ. ಈ ದೇವಾಲಯಕ್ಕೆ ಯಾತ್ರೆಗೆಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ವೇಳೆಯೇ ದುರಂತ ಸಂಭವಿಸಿದ್ದು, ಸಾವು-ನೋವು ಹೆಚ್ಚಾಗಲು ಕಾರಣವಗಿದೆ.