ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆಯಲು ಸೂಚನೆ ನೀಡಿದೆ.
ಜಾಮೀನು ರದ್ದು ತೀರ್ಪು ಹೊರಬರುತ್ತಿದ್ದಂತೆ ಗಲಿಬಿಲಿಗೊಂಡಿರುವ ದರ್ಶನ್ ಸದ್ಯ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸಿರುವ ಪೊಲೀಸರು ದರ್ಶನ್ ಗಾಗು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ದರ್ಶನ್ ನಿವಾಸ, ಮೈಸೂರಿನಲ್ಲಿರುವ ಮನೆ, ಫಾರ್ಮ್ ಹೌಸ್ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಮೈಸೂರಿನ ಮನೆಯಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ್ ಒಬ್ಬರೇ ಇದ್ದು, ಮನೆಯ ಹೊರಗಡೆ ಗೇಟ್ ಗೆ ಬೀಗ ಹಾಕಿಕೊಂಡು ಒಳಗಿದ್ದಾರೆ ಎಂದು ತಿಳಿದುಬಂದಿದೆ. ಫಾರ್ಮ್ ಹೌಸ್ ನಲ್ಲಿ, ಆರ್. ಆರ್ ನಗರದ ಮನೆಯಲ್ಲಿಯೂ ದರ್ಶನ್ ಇಲ್ಲ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ದರ್ಶನ್ ಸುಂಟಿಕೊಪ್ಪದ ಕಡೆಯಿಂದ ಮೈಸೂರು ಮಾರ್ಗವಾಗಿ ಹೊರಟಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ದರ್ಶನ್ ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಗದ ಕಾರಣ ಪೊಲೀಸರು ಹುಡುಕಾಟ ನಡೆಸಿದ್ದಾರೆ.