ಬೆಂಗಳೂರು: ನಾಳೆಯಿಂದ ಮೂರು ಜಿಲ್ಲೆಗಳಲ್ಲಿ ಅಕ್ಕ ಪಡೆ ಕಾರ್ಯಾರಂಭ ಮಾಡಲಿದೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಸಜ್ಜಾಗಿರುವ ಪಡೆ ಇದಾಗಿದ್ದು, ಬೆಳಗಾವಿ, ಮೈಸೂರು, ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ಅವಧಿಯಲ್ಲಿ ಹೆಚ್ಚುತ್ತಿರುವ ಬಾಲ ಗರ್ಭಿಣಿ ಪ್ರಕರಣ ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಜೆಡಿಎಸ್ ಸದಸ್ಯ ಸಿ.ಬಿ. ಸುರೇಶ್ ಬಾಬು ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
ಬಾಲ್ಯ ವಿವಾಹ, ಬಾಲ ಗರ್ಭಿಣಿ ಪ್ರಕರಣಗಳ ನಿಯಂತ್ರಣ ಹಾಗೂ ಜನಜಾಗೃತಿಗೆ ಆಗಸ್ಟ್ 15 ರಿಂದ ಬೆಳಗಾವಿ, ಮೈಸೂರು, ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಆರಂಭಿಸಲಾಗುವುದು. ಈಗಾಗಲೇ ಬೀದರ್ ನಲ್ಲಿ ಅಕ್ಕಪಡೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮೂರು ಜಿಲ್ಲೆಗಳಲ್ಲಿ ಆಗಸ್ಟ್ 15 ರಿಂದ ಜಾರಿಯಾಗಲಿದೆ. ಇದು ಯಶಸ್ವಿಯಾದರೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.