ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ದೂರುದಾರ ತೋರಿಸಿರುವ ಜಾಗಗಳಲ್ಲಿ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹುನ್ನಾರ ನಡೆಸಲಾಗುತ್ತಿದೆ ಎಂದು ಕಿಡಿಕಾರಿರುವ ಬಿಜೆಪಿ ಧರ್ಮಸ್ಥಳದ ಪರ ನಾವಿದ್ದೇವೆ ಎಂದು ಹೊಸ ಅಭಿಯಾನ ಆರಂಭಿಸಿದೆ.
ಬಿಜೆಪಿ ನಾಯಕರು ಎರಡು ಹಂತದಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶಾಸಕರ ತಂಡ ವಾರಾಂತ್ಯದಲ್ಲಿ ಆಗಸ್ಟ್ 17 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಮತ್ತೊಂದೆಡೆ ಯಲಹಂಕಾ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಕಾರಿನಲ್ಲಿ ರ್ಯಾಲಿ ನಡೆಯಲಿದ್ದು, ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಘೋಷವಾಕ್ಯದಡಿ ಅಭಿಯಾನ ನಡೆಯಲಿದೆ.