ಮಂಡ್ಯ: ಯೂರಿಯಾ ರಾಸಾಯನಿಕ ರಸಗೊಬ್ಬರ ತಿಂದು ಮೂರು ಹಸುಗಳು ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲೂಕಿನ ಚನ್ನೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ದಲಿಂಗೇಗೌಡ ಅವರಿಗೆ ಸೇರಿದ ಎರಡು ನಾಟಿ ಹಸುಗಳು ಮತ್ತು ದೈತೇಗೌಡ ಅವರಿಗೆ ಸೇರಿದ ಒಂದು ಗರ್ಭ ಧರಿಸಿದ್ದ ಸೀಮೆ ಹಸು ಮೃತಪಟ್ಟಿದೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಎಂದಿನಂತೆ ಬೆಳಿಗ್ಗೆ ಕೊಟ್ಟಿಗೆಯಿಂದ ಹಸುಗಳನ್ನು ಹೊರಬಿಟ್ಟ ಕೂಡಲೇ ಹಿತ್ತಲ ಕಡೆಗೆ ಬಂದಿವೆ. ವರಾಂಡದಲ್ಲಿ ಒಂದೇ ಕಡೆ ಪಶು ವ್ಯವಹಾರ ಮತ್ತು ಯೂರಿಯಾ ರಾಸಾಯನಿಕ ಗೊಬ್ಬರ ಜೋಡಿಸಿಟ್ಟಿದ್ದ ಕಡೆಗೆ ಬಂದ ಹಸುಗಳು ರಸಗೊಬ್ಬರದ ಚೀಲಕ್ಕೆ ಬಾಯಿ ಹಾಕಿ ಯೂರಿಯಾ ತಿಂದಿವೆ.
ಮನೆಯವರು ಬಂದು ನೋಡುವಷ್ಟರಲ್ಲಿ ಹಸುಗಳು ಅಸ್ವಸ್ಥಗೊಂಡು ಸಾವನ್ನಪ್ಪಿವೆ. ವಡ್ಡರಹಳ್ಳಿ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಕುಟುಂಬಕ್ಕೆ ಜೀವನಾಧಾರವಾಗಿದ್ದ ಹಸುಗಳನ್ನು ಕಳೆದುಕೊಂಡ ಬಡ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ತಾಲೂಕು ಆಡಳಿತಕ್ಕೆ ರೈತರು ಮನವಿ ಮಾಡಿದ್ದಾರೆ.