ನವದೆಹಲಿ: ದೆಹಲಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಶೀಘ್ರದಲ್ಲೇ ಆಶ್ರಯ ತಾಣಗಳಿಗೆ ಹಾಕುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಈ ಕುರಿತಾಗಿ ಎನ್.ಜಿ.ಒ.ಗಳು ಅಡ್ಡಿಪಡಿಸಿದಲ್ಲಿ ನಮಗೆ ಹೇಳಿ. ನಾವು ಕ್ರಮ ಕೈಗೊಳ್ಳುತ್ತೇವೆ. ರೇಬಿಸ್ ನಿಂದಾಗಿ ಮಕ್ಕಳು ಸತ್ತರೆ ನೀವು ಮರಳಿ ಜೀವ ಕೊಡುತ್ತೀರಾ ಎಂದು ಸುಪ್ರೀಂ ಕೋರ್ಟ್ ಕಿಡಿಕಾರಿದೆ.
ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸಾಗಿಸಲು ಪ್ರಾಣಿ ದಯಾ ಸಂಸ್ಥೆಗಳು, ಎನ್‌ಜಿಒಗಳು ಅಡ್ಡಿಪಡಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ. ದೆಹಲಿಯಲ್ಲಿ ಈ ವರ್ಷ 26 ಸಾವಿರ ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಪ್ರಾಣಿ ದಯಾ ಕಾರ್ಯಕರ್ತೆ ಮನೇಕಾ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಅವೈಜ್ಞಾನಿಕವಾಗಿದೆ. ದೆಹಲಿಯಲ್ಲಿ ಮೂರು ಲಕ್ಷ ನಾಯಿಗಳಿದ್ದು, ಅವುಗಳ ಆಶ್ರಯಕ್ಕೆ 3,000 ಆಶ್ರಯ ಕೇಂದ್ರಗಳು ಬೇಕಿದೆ. ಪ್ರತಿಯೊಂದುಕ್ಕೂ ಒಳಚರಂಡಿ, ನೀರು, ಶೆಡ್, ಅಡುಗೆ ಮನೆ, ಕಾವಲುಗಾರ ಅಗತ್ಯವಿದ್ದು, ಇದಕ್ಕೆ ಸುಮಾರು 15 ಸಾವಿರ ಕೋಟಿ ರೂ ವೆಚ್ಚವಾಗುತ್ತದೆ. ದೆಹಲಿಯಲ್ಲಿ 15,000 ಕೋಟಿ ರೂಪಾಯಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆ:
ಬೀದಿ ನಾಯಿಗಳ ಸ್ಥಳಾಂತರದ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತರು ವಿರೋಧಿಸಿದ್ದಾರೆ. ದೆಹಲಿ-ಎನ್‌ಸಿಆರ್ ನಾದ್ಯಂತದ ಪ್ರಾಣಿ ಪ್ರಿಯರು, ಆಹಾರ ನೀಡುವವರು, ರಕ್ಷಕರು ಮತ್ತು ಆರೈಕೆದಾರರು ಸೋಮವಾರ ಇಂಡಿಯಾ ಗೇಟ್‌ನಲ್ಲಿ ಜಮಾಯಿಸಿ ಎಂಟು ವಾರಗಳ ಒಳಗೆ ಬೀದಿ ನಾಯಿಗಳನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಬೇಕೆಂಬ ಸುಪ್ರೀಂ ಕೋರ್ಟ್‌ನ ಆದೇಶವನ್ನು ವಿರೋಧಿಸಿದರು.
ಪ್ರತಿಭಟನಾಕಾರರ ಪ್ರಕಾರ, ನಾಯಿ ಕಡಿತ ಪ್ರಕರಣಗಳು ಮತ್ತು ರೇಬೀಸ್ ಸಾವುಗಳ ಕುರಿತು ವರದಿಯಾದ ಅಂಕಿಅಂಶಗಳನ್ನು ಅತಿಯಾಗಿ ಉತ್ಪ್ರೇಕ್ಷಿಸಲಾಗಿದ್ದು, ಇದು ಅನಗತ್ಯ ಭೀತಿಯನ್ನು ಸೃಷ್ಟಿಸಿದೆ. ಬೀದಿ ನಾಯಿಗಳನ್ನು ಅವುಗಳ ಪ್ರದೇಶಗಳಿಂದ ತೆಗೆದುಹಾಕುವುದು ಪರಿಹಾರವಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಸಂತಾನಹರಣ ಚಿಕಿತ್ಸೆ, ಲಸಿಕೆ ಹಾಕುವುದು ಸೇರಿ ಪ್ರಾಣಿ ಜನನ ನಿಯಂತ್ರಣ(ಎಬಿಸಿ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.