ಬೆಂಗಳೂರು: ಸರ್ಕಾರಿ ಶಾಲೆಗಳ ನಿರ್ವಹಣೆಗಾಗಿ ಬಿಡುಗಡೆ ಮಾಡುವ ಶಾಲಾ ಅನುದಾನದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒದಗಿಸುತ್ತಿರುವ ಅನುದಾನವನ್ನು ಶೇಕಡ 10 ರಿಂದ ಶೇಕಡ 30ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ, ಮಧು ಜಿ. ಮಾದೇಗೌಡ, ಜೆಡಿಎಸ್ ನ ಕೆ. ವಿವೇಕಾನಂದ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಶಾಲೆಗಳಲ್ಲಿ ಶೌಚಾಲಯಗಳ ನಿರ್ವಹಣೆ ಪ್ರಕರಣಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ನಡೆಸದೇ ಶಿಕ್ಷಕರನ್ನು ಅಮಾನತುಗೊಳಿಸಿ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ಖಾಸಗಿ ಏಜೆನ್ಸಿಗೆ ವಹಿಸಬೇಕೆಂದು ರಾಮೋಜಿಗೌಡ ಒತ್ತಾಯಿಸಿದ್ದಾರೆ.
ಇದಕ್ಕೆ ಧ್ವನಿಗೂಣಿಸಿದ ಸಭಾಪತಿ ಬಸವರಾಜ್ ಹೊರಟ್ಟಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ನಾನು ಕೂಡ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಈ ವೇಳೆ ಸಚಿವ ಮಧು ಬಂಗಾರಪ್ಪ, ಶಾಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಎಸ್ಒಪಿ ಜಾರಿಗೊಳಿಸಲಾಗುವುದು. ಪೆನ್ ಹಿಡಿಯಬೇಕಾದ ಮಕ್ಕಳ ಕೈಗಳಿಗೆ ಪೊರಕೆ ನೀಡಬಾರದು. ಸ್ವಚ್ಛತಾ ಅನುದಾನ ಶೇ. 30ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಹೇಳಿದ್ದಾರೆ.