ಬೆಂಗಳೂರು: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿವಿಧ ಪಡಿತರ ಚೀಟಿಗಳ ಪೈಕಿ 12.69 ಲಕ್ಷ ಪಡಿತರ ಚೀಟಿಗಳು ಶಂಕಾಸ್ಪದವಾಗಿವೆ. ಈ ಪಡಿತರ ಚೀಟಿ ಹಾಗೂ ಫಲಾನುಭವಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಆಹಾರ ಸಚಿವ ಕ.ಹೆಚ್. ಮುನಿಯಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಎಂ. ನಾಗರಾಜ ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಡೀ ದಕ್ಷಿಣ ಭಾರತದಲ್ಲಿಯೇ ಕರ್ನಾಟಕದಲ್ಲಿ ಶೇಕಡ 80ರಷ್ಟು ಬಿಪಿಎಲ್ ಕುಟುಂಬಗಳಿವೆ. ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಬಿಪಿಎಲ್ ಕುಟುಂಬಗಳ ಸಂಖ್ಯೆ ಶೇಕಡ 50ರೊಳಗೆ ಇದೆ. ಹೀಗಾಗಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಗುರುತಿಸಿ ಕಾರ್ಡ್ ರದ್ದು ಮಾಡಲು ಮುಂದಾದಾಗ ವಿರೋಧ ವ್ಯಕ್ತವಾಯಿತು ಎಂದು ಹೇಳಿದ್ದಾರೆ.
ಇದರಿಂದ ಅರ್ಹರಿಗೆ ಪಡಿತರ ಪಡೆಯಲು ಆಗುವುದಿಲ್ಲ. ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಕೇಂದ್ರ ಸರ್ಕಾರಕ್ಕಿಂತ ರಾಜ್ಯದ ಮಾನದಂಡಗಳು ಹೆಚ್ಚಾಗಿವೆ. ಹೀಗಾಗಿ ಹೆಚ್ಚು ಜನರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇಲಾಖೆಯ ತಂತ್ರಾಂಶದಲ್ಲಿ ಕಂಡು ಬಂದ ದೋಷ ಪರಿಹರಿಸಿದ್ದು, ಪಡಿತರ ಚೀಟಿದಾರರಿಗೆ ಯಾವುದೇ ಸಮಸ್ಯೆ ಇಲ್ಲದೆ ಪಡಿತರ ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ.