ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ನಡೆದ ದುರಂತದಲ್ಲಿ ಎಂಟು ಜನ ಸಾವನ್ನಪ್ಪಿದ್ದು, ಕನಿಷ್ಠ 25 ಜನರು ಗಾಯಗೊಂಡಿದ್ದಾರೆ.
ಮೃತರೆಲ್ಲರೂ ಮಹಿಳೆಯರು, ಪಾಪಲ್ವಾಡಿ ಗ್ರಾಮದವರಾಗಿದ್ದು, ಶ್ರಾವಣ ಮಾಸದ ಶುಭ ದಿನದ ಪ್ರಯುಕ್ತ ಖೇಡ್ ತಹಸಿಲ್‌ನಲ್ಲಿರುವ ಕುಂದೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಮಹಿಳೆಯರು ಮತ್ತು ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್ ರಸ್ತೆಯಿಂದ 25 ರಿಂದ 30 ಅಡಿ ಆಳಕ್ಕೆ ಉರುಳಿದೆ. ಪಾಪಲ್ವಾಡಿ ಗ್ರಾಮದವರು ಶ್ರಾವಣ ಮಾಸದ ಪ್ರಯುಕ್ತ ಪಶ್ಚಿಮ ಮಹಾರಾಷ್ಟ್ರದ ಖೇಡ್ ತಹಸಿಲ್‌ನಲ್ಲಿರುವ ಶ್ರೀ ಕ್ಷೇತ್ರ ಮಹಾದೇವ ಕುಂದೇಶ್ವರ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಕಪ್ ವ್ಯಾನ್ ನಲ್ಲಿ 30 ರಿಂದ 35 ಪ್ರಯಾಣಿಕರು ಇದ್ದರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳಿದ್ದರು ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಅಪಘಾತದಲ್ಲಿ ಎಂಟು ಮಹಿಳೆಯರು ಸಾವನ್ನಪ್ಪಿದ್ದಾರೆ. ಸುಮಾರು 25 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.