ಬೆಂಗಳೂರು: ಮುಖ್ಯಮಮತ್ರಿ ಸಿದ್ದರಾಮಯ್ಯ ಕುರ್ಚಿಯ ಕಾಲಗಳು ಅಲುಗಾಡುತ್ತಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ಈಗಾಗಲೇ ಸಿಎಂ ಕುರ್ಚಿಯ ಎರಡು ಕಾಲುಗಳನ್ನು ಕಿತ್ತು ಹಾಕಿದ್ದಾರೆ. ಇನ್ನೊಂದು ಕಾಲು ಕಿತ್ತರೆ ಸಿದ್ದರಾಮಯ್ಯ ಬಿದ್ದೋಗುತ್ತಾರೆ ಎಂದು ಹೇಳಿದ್ದಾರೆ.
ಕೆ.ಎನ್. ರಾಜಣ್ಣ ರಾಜೀನಾಮೆ ಹಿಂದೆ ಡಿಕೆ ಇದ್ದಾರೆ. ಅಕ್ಟೋಬರ್ ನಲ್ಲಿ ಮುಖ್ಯಮಂತ್ರಿ ಕೆಳಗಿಳಿಸಲು ಡಿಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಂದುಳಿದ ವರ್ಗದ ವರದಿ ಬರದಂತೆ ಮಾಡಿದ್ದು ಇದೇ ಡಿಕೆ ಎಂದು ಅಶೋಕ್ ಆರೋಪಿಸಿದ್ದಾರೆ.
ಎಂಪಿ ಚುನಾವಣೆಯಲ್ಲಿ ತಪ್ಪಾಗಿಲ್ಲ ಎಂದು ರಾಜಣ್ಣ ಹೇಳಿದ್ದರು. ಇದರಿಂದ ರಾಹುಲ್ ಗಾಂಧಿಗೆ ಕಪಾಳಮೋಕ್ಷವಾಯಿತು. ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ರಾಹುಲ್ ಕಾಲ ಶುರುವಾಗಿದೆ. ಅಕ್ಟೋಬರ್ ಕ್ರಾಂತಿ ಆಗಸ್ಟ್ ನಲ್ಲಿಯೇ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.