ಧಾರವಾಡ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಹುಬ್ಬಳ್ಳಿ ನೈಋತ್ಯ ರೈಲ್ವೆ ವಿಭಾಗಕ್ಕೆ ಆದೇಶ ನೀಡಿದೆ.
ದೂರುದಾರರಿಗೆ 1 ತಿಂಗಳೊಳಗೆ 8 ಲಕ್ಷ ರೂಪಾಯಿ ಪವತಿಸಬೇಕು. ಜತೆಗೆ ಪ್ರಕರಣದ ವೆಚ್ಚ 10 ಸಾವಿರ ರೂಪಾಯಿ ಕೊಡಬೇಕು ಎಂದು ನೈಋತ್ಯ ರೈಲ್ವೆಗೆ ನಿರ್ದೇಶಿಸಿದೆ.
ಹುಬ್ಬಳ್ಳಿಯ ಕೇಶವನಗರ ನಿವಾಸಿ ಕೀರ್ತಿವತಿ ಎಂಬುವವರು ಪತಿ ಸುಧೀಂದ್ರ ಕುಲಕರ್ಣಿ ಅವರೊಂದಿಗೆ 2023ರ ಫೆ.4ರಂದು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು. ರಾತ್ರಿ ಸುಧೀಂದ್ರ ಅವರು ರೈಲಿನ ಶೌಚ್ಜಾಲಯಕ್ಕೆ ಹೋದಾಗ ಬೋಗಿಯ ಬಾಗಿಲು ತೆರೆದಿದ್ದ ಕಾರಣ ಆಯ ತಪ್ಪಿ ರೈಲಿನಿಂದ ಬಿದ್ದಿದ್ದರು. ರಿಸರ್ವ್ ಕ್ಲಾಸ್ ಗೆ ಹಣ ಪಡೆದು ಬೋಗಿಯಲ್ಲಿ ಟಿಟಿಇ, ಗಾರ್ಡ್ ಇರದೇ ಬೋಗಿಯ ಬಾಗಿಲು ಮುಚ್ಚದಿರುವುದೇ ದುರಂತಕ್ಕೆ ಕಾರಣವಾಗಿತ್ತು. ದುರ್ಘಟನೆಯಲ್ಲಿ ಮೃತಪಟ್ಟರೆ ಇಲಾಖೆಯಿಂದ ೮ಲಕ್ಷ ರೂ ಪಡೆಯಲು ರೈಲ್ವೆ ಟ್ರಿಬ್ಯೂನಲ್ ನಲ್ಲಿ ದಾವೆ ಹೂಡಬೇಕು. ಗ್ರಾಹಕರ ಆಯೋಗದಲ್ಲಿ ವಿಮೆ ಕೇಳಲು ಅರ್ಹರಲ್ಲ ಎಂದು ಇಲಾಖೆ ನಿರಾಕರಿಸಿತ್ತು. ಇದರಿಂದ ನೊಂದ ಕೀರ್ತಿವತಿ ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.