ಬೆಂಗಳೂರು: ರಾಜ್ಯದ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಬಾರಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಲು ತೀರ್ಮಾನಿಸಿದ್ದು, ರೈತರಿಗೆ 8000 ಕೋಟಿ ರೂ. ಸಿಗಲಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವರು, ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಬೆಂಬಲ ಬೆಲೆಯಡಿ ಸುಮಾರು 7 ಲಕ್ಷ ರೈತರಿಂದ ಖರೀದಿಗೆ ನಿರ್ಧರಿಸಲಾಗಿದ್ದು, ಈ ವರ್ಷ 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ನಿರ್ಧರಿಸಲಾಗಿದೆ. ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿಗೆ ತೀರ್ಮಾನಿಸಿದೆ. ಪ್ರತಿ ಕ್ವಿಂಟಾಲ್ ಗೆ 4886 ರೂಪಾಯಿ ನಿಗದಿಪಡಿಸಲಾಗಿದೆ. ಕಳೆದ ವರ್ಷಕ್ಕಿಂತ 596 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸೆಪ್ಟಂಬರ್ ನಿಂದ ನೋಂದಣಿ ಆರಂಭಿಸಲಾಗುವುದು. ಜನವರಿಯಿಂದ ಮಾರ್ಚ್ ವರೆಗೂ ಖರೀದಿ ನಡೆಯಲಿದೆ ಎಂದು ಹೇಳಿದ್ದಾರೆ.
3 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ತೀರ್ಮಾನಿಸಿದ್ದು, ಸೆಪ್ಟಂಬರ್ ನಿಂದ ನೋಂದಣಿ ಆರಂಭವಾಗಲಿದೆ. ನವೆಂಬರ್, ಡಿಸೆಂಬರ್ ನಲ್ಲಿ ಖರೀದಿಸಲಾಗುವುದು, ಪ್ರತಿ ಕ್ವಿಂಟಾಲ್ ಭತ್ತಕ್ಕೆ 2369 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಈ ವರ್ಷ 69 ರೂ. ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
3 ಲಕ್ಷ ಮೆಟ್ರಿಕ್ ಟನ್ ಬಿಳಿ ಜೋಳ ಖರೀದಿಗೆ ನಿರ್ಧರಿಸಿದ್ದು, ಪ್ರತಿ ಕ್ವಿಂಟಾಲ್ ಗೆ 3669 ರೂ. ನೀಡಲು ತೀರ್ಮಾನಿಸಲಾಗಿದೆ. ಕಳೆದ ವರ್ಷಕ್ಕಿಂತ 328 ರೂಪಾಯಿ ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಅಕ್ಟೋಬರ್ ನಿಂದ ನೋಂದಣಿ ಪ್ರಾರಂಭವಾಗಲಿದೆ. ಡಿಸೆಂಬರ್ ನಿಂದ ಮಾರ್ಚ್ ವರೆಗೆ ಖರೀದಿಸಲಾಗುವುದು ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಸಾಮೆ, ನವಣೆ, ಹಾರಕ ಇತರೆ ಸಿರಿಧಾನ್ಯಗಳ ಖರೀದಿಗೆ ನಿರ್ಧರಿಸಲಾಗಿದೆ. ಎಂ.ಎಸ್.ಪಿ. 4886 ರೂ. ಜೊತೆಗೆ ಸರ್ಕಾರದಿಂದ 114 ರೂಪಾಯಿ ಸೇರಿ ಪ್ರತಿ ಕ್ವಿಂಟಾಲ್ ಗೆ 5,000 ರೂ. ದರದಲ್ಲಿ ಖರೀದಿಸಲಾಗುವುದು. 7 ಲಕ್ಷಕ್ಕೂ ಹೆಚ್ಚು ರೈತರಿಂದ 15 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಗಳನ್ನು 8000 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.