ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ದಂಪತಿಗೆ ಜೀವ ಬೆದರಿಕೆ ಸಂದೇಶ ಬಂದಿದ್ದು, ದೂರು ದಾಖಲಾಗಿದೆ.
ಧರ್ಮಸ್ಥಳದ ಪ್ರಕರಣದ ವಿಚಾರವಾಗಿ ತಮಗೆ ಜೀವ ಬೆದರಿಕೆ ಸಂದೇಶ ಬರುತ್ತಿದೆ ಎಂದು ಆರೋಪಿಸಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಜತ್ & ಅಕ್ಷತಾ ದಂಪತಿ ದೂರು ನೀಡಿದ್ದಾರೆ.
ನಾವು ಯಾವುದೇ ಜಾತಿ, ಧರ್ಮದ ಬಗ್ಗೆ ಮಾತನಾಡಿಲ್ಲ. ಸೌಜನ್ಯ ಪರ ನ್ಯಾಯಕ್ಕಾಗಿ ಭೇಟಿ ನೀಡಿದ್ದೆವು. ನನ್ನನ್ನ ಕತ್ತರಿಸುತ್ತೀನಿ ಎಂದು ಕೆಲವರು ಬೆದರಿಕೆ ಹಾಕಿದರು. ನನ್ನೊಂದಿಗೆ ಇದ್ದ ಕೆಲವರು ಯೂಟ್ಯೂಬರ್ಸ್ ಗಳು ಹಲ್ಲೆ ನಡೆಸಿದರು ಎಂದು ರಜತ್ ಹೇಳಿದ್ದಾರೆ.
ಏನಿದು ಘಟನೆ..?
ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಯುಟ್ಯೂಬರ್ ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಅಸ್ಥಿಪಂಜರ ಶೋಧ ಕಾರ್ಯಾಚರಣೆ ಸ್ಥಳದ ಸಮೀಪ ಹಲ್ಲೆ ನಡೆಸಲಾಗಿದೆ. ನೇತ್ರಾವತಿಯ ಪಾಂಗಳ ಬಳಿ ಪ್ರತಿಷ್ಠಿತ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಸುಳ್ಳು ವರದಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ವಿರೋಧಿಸಿ ಯೂಟ್ಯೂಬರ್ ಗಳ ಪರ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆಯವರ ನಡುವೆ ಕೈ ಕೈ ಮಿಲಾವಣೆಯಾಗಿದೆ. ಪ್ರತಿಷ್ಠಿತ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿ ವರದಿ ಮಾಡಲಾಗಿದೆ ಎಂದು ಗ್ರಾಮಸ್ಥರು ಹೋರಾಟಗಾರರ ನಡುವೆ ಸಂಘರ್ಷ ಉಂಟಾಗಿದೆ.
ಅಜಯ್, ಅಭಿಷೇಕ್, ಸಂತೋಷ್ ಅವರ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಲಾಗಿದೆ. ಕ್ಯಾಮೆರಾ ಕಸಿದುಕೊಂಡು ಹಾನಿ ಮಾಡಲಾಗಿದೆ ಎನ್ನಲಾಗಿದ್ದು, ಈ ವೇಳೆ ಪರಿಸ್ಥಿತಿ ಕೈ ಮೀರಿದೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಅನೇಕ ವಾಹನಗಳ ಗಾಜು ಪುಡಿಪುಡಿಯಾಗಿವೆ. ಯುವಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಘಟನೆಯಲ್ಲಿ ಹಲ್ಲೆಗೊಳಗಾದ ನಾಲ್ವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ,