ಬೆಂಗಳೂರು: ರಹಸ್ಯವಾಗಿ ಟೆಲಿಫೋನ್ ಎಕ್ಸ್ ಚೇಂಜ್ ತೆರೆದು ಅಂತರಾಷ್ಟ್ರೀಯ ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಸರ್ಕಾರ ಮತ್ತು ದೂರ ಸಂಪರ್ಕ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಇಬ್ಬರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಮಲಪ್ಪುರಂನ ಮೊಹಮ್ಮದ್ ಸಫಾಪ್ ಕುರುನಿಯನ್ ಹಾಗೂ ಕೊಡಗು ಜಿಲ್ಲೆ ಸೋಮವಾರಪೇಟೆಯ ಎ.ಎಂ. ಫೈಯಾಜ್ ಬಂಧಿತರು.
ಬಂಧಿತ ಆರೋಪಿಗಳಿಂದ ರಹಸ್ಯ ಟೆಲಿಫೋನ್ ಎಕ್ಸ್ ಚೆಂಜ್, ಸಿಮ್ ಬಾಕ್ಸ್ ಗಳು, ಮೊಬೈಲ್, ಆರು ರೌಟರ್ ಗಳು, ಒಂದು ಲ್ಯಾಪ್ಟಾಪ್ ಹಾಗೂ 706 ಸಿಮ್ ಗಳು ಸೇರಿದಂತೆ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಸಿಮ್ ಕಾರ್ಡ್ ಗಳನ್ನು ಇತರೆ ಸೈಬರ್ ಅಪರಾಧಗಳಿಗೂ ಬಳಕೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಲಾಗಿದೆ. ಸರ್ಕಾರ ಮತ್ತು ದೂರ ಸಂಪರ್ಕ ಕಂಪನಿಗಳಿಗೆ ಆಗಿರುವ ಕೋಟ್ಯಂತರ ರೂಪಾಯಿ ನಷ್ಟದ ಪ್ರಮಾಣ ಲೆಕ್ಕ ಹಾಕಬೇಕಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.