ಸಾರಿಗೆ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಎಸ್ಮಾ ಜಾರಿ ಮಾಡಲಾಗಿದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆ. ಆದರೆ ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲವೆಂದು ಕಾರ್ಮಿಕ ಸಂಘಟನೆಗಳು ಹೇಳಿದ್ದು, ಮುಷ್ಕರ ಕೈಗೊಂಡಿವೆ.
ಹೀಗಾಗಿ ಬಹುತೇಕ ಕಡೆಗಳಲ್ಲಿ ಬಸ್ ಬಂದ್ ಮಾಡಲಾಗಿದ್ದು, ಪ್ರಯಾಣಿಕರಿಗೆ ಬಿಸಿ ತಟ್ಟಿದೆ. ಸೋಮವಾರ ಕರ್ತವ್ಯ ಮುಗಿಸಿದ ಬಹುತೇಕ ಸಿಬ್ಬಂದಿ ಮನೆಗೆ ತೆರಳಿದ್ದಾರೆ. ಎಸ್ಮಾ ಜಾರಿ ಮಾಡುವುದು ಸಾಮಾನ್ಯ. ಯಾವುದೇ ಕ್ರಮ ಕೈಗೊಂಡರೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ನೌಕರರು ಹೇಳಿದ್ದಾರೆ.
ಆದರೆ, ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಲು ಕೆಲವು ನೌಕರರಿಗೆ ಆತಂಕ ಶುರುವಾಗಿದೆ. 2021ರ ಪ್ರತಿಭಟನೆಯ ವೇಳೆ ಆದಂತಹ ಅನುಭವ ಆಗಬಹುದು. ಎಸ್ಮಾ ಜಾರಿ, ಕೋರ್ಟ್ ಆದೇಶ, ಅಮಾನತಿನ ಆತಂಕ ನೌಕರರಲ್ಲಿ ಶುರುವಾಗಿದೆ. ಮತ್ತೆ ಅಮಾನತು ಮಾಡಿದರೆ ವರ್ಷಗಳ ಕಾಲ ಕೆಲಸ ಇರುವುದಿಲ್ಲ. ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಅನೇಕ ನೌಕರರು ಹಿಂದೇಟು ಹಾಕಿದ್ದಾರೆ. ಜೊತೆಗೆ ಮತ್ತೊಂದು ಸಂಘಟನೆಯಿಂದ ಮುಷ್ಕರಕ್ಕೆ ಬೆಂಬಲ ನೀಡಲಾಗಿಲ್ಲ. ಸಂಘಟನೆಯ ಕೆಲವು ನೌಕರರು ಬಸ್ ಓಡಿಸುವ ಸಾಧ್ಯತೆ ಇದೆ. ಇದರಿಂದ ನೌಕರರಲ್ಲಿಯೇ ಗೊಂದಲ ನಿರ್ಮಾಣವಾಗುವ ಸಂಭವ ಇದೆ.