ಬೆಂಗಳೂರು : ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಎಂದಿನಂತೆ ನಾಳೆ ಬಸ್ ಸಂಚಾರ ನಡೆಯುವ ಸಾಧ್ಯತೆಯಿದೆ. ಸಾರಿಗೆ ಸಂಘಟನೆಗಳ ಮುಖಂಡರು ಕೋರ್ಟ್ ಆದೇಶ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಸಂಬಂಧ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದ್ದು, ಒಂದು ದಿನದ ಮಟ್ಟಿಗೆ ಮುಷ್ಕರ ಕೈ ಬಿಡಲು ಸಾರಿಗೆ ನೌಕರರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಹಾಗೂ ಪಿಐಎಲ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಒಂದು ದಿನದ ಮಟ್ಟಿಗೆ ಮುಷ್ಕರ ಕೈ ಬಿಡಲು ಸಾರಿಗೆ ನೌಕರರಿಗೆ ಹೈಕೋರ್ಟ್ ಆದೇಶ ಹೊರಡಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು ಹೈಕೋರ್ಟ್ ಗೆ ಪಿಐಎಲ್ (PIL) ಸಲ್ಲಿಕೆ ಮಾಡಿದ್ದರು. ಮುಷ್ಕರ ನಡೆಸುವುದರಿಂದ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ಥಗೊಳ್ಳಲಿದೆ. ಇದರಿಂದ ನಾಗರಿಕರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ವೇತನ ಹೆಚ್ಚಳ ಹಾಗೂ ವೇತನ ಹೆಚ್ಚಳ ಹಿಂಬಾಕಿ ಪಾವತಿ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗಸ್ಟ್ 5 ರಿಂದ ಮುಷ್ಕರಕ್ಕೆ ಕರೆ ನೀಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ನೌಕರರ ಮನವೊಲಿಸುವ ಕೆಲಸ ಮಾಡಿದ್ದರು. ಆದರೆ ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ನಡೆದ ಸಭೆ ವಿಫಲವಾಗಿದ್ದು, ನಾವು ಮುಷ್ಕರ ಮಾಡೇ ಮಾಡುತ್ತೇವೆ ಎಂದು ಹೇಳಿ ಸಾರಿಗೆ ನೌಕರರ ಮುಖಂಡರು ಸಭೆಯಿಂದ ಹೊರಗೆ ಬಂದಿದ್ದರು. ಇದರ ನಡುವೆ ಹೈಕೋರ್ಟ್ ಮುಷ್ಕರ ನಡೆಸದಂತೆ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ .ನಾಳೆ ಬಸ್ ಸಂಚಾರ ಇರುತ್ತೋ..ಇಲ್ವಾ ಎಂಬ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ.