ಬೆಂಗಳೂರು : 38 ತಿಂಗಳ ಅರಿಯರ್ಸ್ ನೀಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಏನಾದರೂ ಗುಡ್ ನ್ಯೂಸ್ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಶಾಕ್ ಎದುರಾಗಿದೆ.
ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ನಡೆದ ಸಭೆ ವಿಫಲವಾಗಿದ್ದು, ಅನಿರ್ದಿಷ್ಟಾವಧಿ ಮುಷ್ಕರ ಫಿಕ್ಸ್ ಆಗಿದೆ. 38 ತಿಂಗಳ ಅರಿಯರ್ಸ್ ನೀಡಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು , ನಾವು ಮುಷ್ಕರ ಮಾಡೇ ಮಾಡುತ್ತೇವೆ ಎಂದು ಹೇಳಿ ಸಾರಿಗೆ ಮುಖಂಡರು ಸಭೆಯಿಂದ ಹೊರಗೆ ಬಂದಿದ್ದಾರೆ.
”2 ವರ್ಷದ ಅರಿಯರ್ಸ್ ಕೊಡ್ತೇವೆ, 38 ತಿಂಗಳ ಅರಿಯರ್ಸ್ ಕೊಡೋಕೆ ಆಗಲ್ಲ ಎಂದು ಸಿಎಂ ಹೇಳಿದ್ದಾರೆ, 38 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು” ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದಾರೆ. ”ಸರ್ಕಾರ ನ್ಯಾಯವಾಗಿ ನಡೆದುಕೊಂಡಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಾವು ನಡೆದುಕೊಳ್ಳುತ್ತಿದ್ದೆವು. ಆದರೆ ಸರ್ಕಾರ ಅನ್ಯಾಯ ಮಾಡಿದೆ. ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯಲ್ಲ. ಸರ್ಕಾರ ಬೇಡಿಕೆ ಈಡೇರಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ” ಎಂದು ಅವರು ಹೇಳಿದರು.
ವೇತನ ಹೆಚ್ಚಳ ಹಾಗೂ ವೇತನ ಹೆಚ್ಚಳ ಹಿಂಬಾಕಿ ಪಾವತಿ ಸೇರಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗಸ್ಟ್ 5 ರಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದಲೇ ಅನಿವರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರು ಸಜ್ಜಾಗಿದ್ದು, ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ 4 ನಿಗಮಗಳಿಂದ ಒಟ್ಟು 23 ಸಾವಿರ ಬಸ್ ಗಳು ರಸ್ತೆಗಿಳಿಯುವುದು ಅನುಮಾನವಾಗಿದೆ.