ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರ ಹೊರವಲಯದ ಗಾಂಧಿನಗರ ಬಡಾವಣೆಯ ಮಾರುತಿ ಮಂದಿರದಲ್ಲಿ ಭಾನುವಾರ ಸಂಜೆ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮದ ಸಾಫ್ಟ್ವೇರ್ ಉದ್ಯೋಗಿ ಸುರೇಶ್ ಭೀಮಪ್ಪ ಬಂಡಿವಡ್ಡರ(36) ಕೊಲೆಯಾದವರು. ಸುರೇಶ್ ಬಂಡಿವಡ್ಡರ ಮತ್ತು ಗಾಂಧಿನಗರದ ಯಲ್ಲಪ್ಪ ಬಂಡಿವಡ್ಡರ ಕುಟುಂಬಗಳ ಮಧ್ಯೆ ಇರುವ ಕಲಹ ಹಾಗೂ ಮನಸ್ತಾಪ ಬಗೆಹರಿಸಲು ಭಾನುವಾರ ಗಾಂಧಿನಗರದ ಮಾರುತಿ ಮಂದಿರದಲ್ಲಿ ಹಿರಿಯರ ಉಪಸ್ಥಿತಿಯಲ್ಲಿ ಸಂಧಾನ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಸುರೇಶ್ ಮತ್ತು ಯಲ್ಲಪ್ಪನ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು, ಯಲ್ಲಪ್ಪ ತಾನು ತಂದಿದ್ದ ಚಾಕುವಿನಿಂದ ಸುರೇಶ್ ಹೊಟ್ಟೆಗೆ ಇರಿದಿದ್ದಾನೆ. ಕೂಡಲೇ ಸುರೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕರೆದೊಯ್ಯುವ ಮಾರ್ಗಮಧ್ಯ ಮೃತಪಟ್ಟಿದ್ದಾರೆ.
ಜಗಳ ಬಿಡಿಸಲು ಬಂದ ಸಾಗರ್ ಅಷ್ಟೇಕರ್ ಮತ್ತು ಇತರರ ಮೇಲೆಯೂ ಯಲ್ಲಪ್ಪ ಹಲ್ಲೆ ಮಾಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯಲ್ಲಪ್ಪ ಚಾಕು ಸಹಿತ ಪೊಲೀಸ್ ಠಾಣೆಗೆ ಶರಣಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.