ನವದೆಹಲಿ: ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಬೂತ್ ಮಟ್ಟದ ಅಧಿಕಾರಿಗಳ ವಾರ್ಷಿಕ ಗೌರವಧನವನ್ನು 6ರಿಂದ 12 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲು ಭಾರತ ಚುನಾವಣಾ ಆಯೋಗ ನಿರ್ಧರಿಸಿದೆ.
ಬೂತ್ ಮಟ್ಟದ ಅಧಿಕಾರಿಗಳ ಗೌರವಧನವನ್ನು 2015ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣಿಯಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳು, ಸೂಪರ್ ವೈಸರ್ ಗಳ ಗೌರವಧನವನ್ನು ಕೂಡ ಹೆಚ್ಚಳ ಮಾಡಲಾಗಿದೆ. ಈ ಮೊದಲು 12,000 ರೂ. ಇದ್ದ ಗೌರವ ಧನವನ್ನು 18 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.
ಇದೇ ಮೊದಲ ಬಾರಿಗೆ ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಸಹ ಗೌರವಧನ ನೀಡಲು ಆಯೋಗ ನಿರ್ಧರಿಸಿದೆ. ಚುನಾವಣಾ ನೋಂದಣಿ ಅಧಿಕಾರಿಗಳಿಗೆ 30,000 ರೂ., ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳಿಗೆ 25,000 ರೂ. ಗೌರವಧನ ನೀಡಲಾಗುವುದು.