ಗಾಜಿಯಾಬಾದ್: ಗುಪ್ತಚರ ಬ್ಯೂರೋ ಅಧಿಕಾರಿಯೊಬ್ಬರು ತನ್ನ ಸಹೋದರಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಾಜಿಯಾಬಾದ್ ನ ಗೋವಿಂದಪುರ ಪ್ರದೇಶದ ಮನೆಯಲ್ಲಿ ನಡೆದಿದೆ.
ಅವಿನಾಶ್ ಕುಮಾರ್ ಹಾಗೂ ಅವರ ಸಹೋದರಿ ಅಂಜಲಿ ಮೃತ ಅಣ್ಣ-ತಂಗಿ. ಇಬ್ಬರ ಮೃತದೇಹ ಮನೆಯ ರೂಮಿನಲ್ಲಿ ಪತ್ತೆಯಾಗಿದೆ. ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮೃತರು ಗೋವಿಂದಪುರದ ಹೆಚ್ ಬ್ಲಾಕ್ ನ ಸುಖ್ ಬೀರ್ ಸಿಂಗ್ ಅವರ ಮಕ್ಕಳು. ಮಲತಾಯಿ ಇಬ್ಬರನ್ನೂ ಹಿಂಸಿಸುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಚಿಕ್ಕಮ್ಮ ಆರೋಪಿಸಿದ್ದಾರೆ. ಕವಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತರ ತಂದೆ ಸುಖ್ ಬಿರ್ ಸಿಂಗ್ ಕೂಡ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಅವರ ಮಲತಾಯಿ ಸರ್ಕಾರಿ ಶಾಲೆ ಶಿಕ್ಷಕಿ. ಮಲತಾಯಿ ಪ್ರತಿಕ್ರಿಯೆ ನೀಡಿ, ತಾನು ಮನೆಗೆ ವಾಪಸ್ ಆದಾಗ ಇಬ್ಬರೂ ಮಕ್ಕಳು ರೂಮಿನಲ್ಲಿದ್ದರು. ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಲಾಕ್ ಆಗಿದ್ದ ರೂಮಿನಿಂದ ಫೋನ್ ರಿಂಗ್ ಆಗುತ್ತಿತ್ತು. ರೂಮಿನ ಬಾಗಿಲು ತೆರೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಕಾರಣ ರೂಮ್ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಅಕ್ಕಪಕ್ಕದ ಮನೆಯವರು ಸ್ಥಳಕ್ಕಾಗಮಿಸಿ ಡೋರ್ ಒಡೆದು ಒಳಗೆ ಹೋದಾಗ ಅಣ್ಣ-ತಂಗಿ ಇಬ್ಬರೂ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಇಬ್ಬರೂ ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಅಣ್ಣ-ತಂಗಿ ಸಾವಿಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.