ದಾವಣಗೆರೆ: ಪತಿಯನ್ನು ಹತ್ಯೆಗೈದು ಪ್ರಿಯಕರನೊಂದಿಗೆ ಪರಾರಿಯಾಗಿ ಸಂಸಾರ ಹೂಡಿದ್ದ ಪತ್ನಿ ಸೇರಿ ಮೂವರು ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
18 ತಿಂಗಳ ಬಳಿಕ ನಿಂಗಪ್ಪ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪತ್ನಿ ಲಕ್ಷ್ಮೀ (38), ಪ್ರಿಯಕರ ತಿಪ್ಪೇಶ್ ನಾಯ್ಕ್ (42) ಹಾಗೂ ಕೊಲೆಗೆ ಸಹಾಯ ಮಾಡಿದ ಸಂತೋಷ್ (38) ಬಂಧಿತ ಆರೋಪಿಗಳು.
ಚನ್ನಗಿರಿ ತಾಲೂಕಿನ ಅಣಪುರ ಗ್ರಾಮದ ನಿವಾಸಿ ಲಕ್ಷ್ಮೀ ಗ್ರಾಮದ ನಿಂಗಪ್ಪ ಜೊತೆ ಕಳೆದ 9 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಆದರೆ ಮಕ್ಕಳಿರಲಿಲ್ಲ. ಶೃಂಗಾರಭಾಗ್ ತಾಂಡಾ ನಿವಾಸಿ ತಿಪ್ಪೇಶ್ ಜೊತೆ ಲಕ್ಷ್ಮೀ ಅನೈತಿಕ ಸಂಬಂಧಹೊಂದಿದ್ದಳು ಎಂದು ಆರೋಪಿಸಲಾಗಿದೆ. ಪತ್ನಿ ಗರ್ಭಿಣಿಯಾಗಿದ್ದಕ್ಕೆ ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿದ್ದ ಪತಿ ನಿಂಗಪ್ಪ, ಪತ್ನಿ ಹೊಟ್ಟೆಗೆ ಒದ್ದಿದ್ದ. ಇದರಿಂದ ಗರ್ಭಪಾತವಾಗಿತ್ತು. ಬಳಿಕ ಲಕ್ಷ್ಮೀ ಪ್ರಿಯಕರನ ಜೊತೆ ಸೇರಿ ಪತಿ ನಿಂಗಪ್ಪನನ್ನು ಹತ್ಯೆಗೈದಿದ್ದಳು.
ಲಕ್ಷ್ಮೀ ಪ್ರಿಯಕರನೊಂದಿಗೆ ಕೇರಳಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದರು. ಇದೀಗ ಚೆನ್ನಗಿರಿ ಪೊಲೀಸರು ಕೇರಳದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.