ಬೆಂಗಳೂರು: ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ಹಣವನ್ನು ಸೈಬರ್ ವಂಚಕರು ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಇದು ಕರ್ನಾಟಕದ ಇತಿಹಾಸದಲ್ಲಿಯೇ ಅತಿದೊಡ್ಡ ಸೈಬರ್ ವಂಚನೆಯಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ರೂಪಾಯಿ ವಂಚಿಸಲಾಗಿದ್ದು, ಪ್ರಕರಣ ಸಂಬಂಧ ಕಂಪನಿ ಉದ್ಯೋಗಿ ರಾಹುಲ್ ಅಗರ್ವಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಕಂಪನಿಯ ಉದ್ಯೋಗಿ ರಾಹುಲ್ ಅಗರ್ವಾ ಲ್ ಗೆ ಕಂಪನಿ ನೀಡಿದ್ದ ಲ್ಯಾಪ್ ಟಾಪ್ ಮೂಲಕವೇ ಹಣ ದೋಚಲಾಗಿದೆ. ನೆಬಿಲೊ ಟೆಕ್ನಾಲಜೀಸ್ ಪ್ರೈ.ಲಿ.ಕಂಪನಿ ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಮಾಡುವ ಫ್ಲಾಟ್ ಫಾರಂ ಆಗಿದೆ. ಸೈಬರ್ ವಂಚಕರು ಎರಡು ಬಾರಿ ಸರ್ವರ್ ಹ್ಯಾಕ್ ಮಾಡಿದ್ದಾರೆ. ಮೊದಲು ಬೆಳಗಿನ ಜಾವ 3:37 ರ ಸುಮಾರಿಗೆ ಕಂಪನಿ ಸರ್ವರ್ ಹ್ಯಾಕ್ ಮಾಡಿ 1 USTD ನ್ನು ಮತ್ತೊಂದು ವ್ಯಾಲೆಟ್ ಗೆ ವರ್ಗಾವಣೆ ಮಾಡಿಕೊಡಿದ್ದಾರೆ. ಬಳಿಕ ಬೆಳಿಗ್ಗೆ 9:40ಕ್ಕೆ ಮತ್ತೆ ಸರ್ವರ್ ಹ್ಯಾಕ್ ಮಾಡಿ ವ್ಯಾಲೆಟ್ ನಿಂದ 44 ಮಿಲಿಯನ್ USTD (ಅಂದಾಜು 3,78,00,00,000) ವರ್ಗಾವಣೆ ಮಾಡಿಕೊಂಡಿದ್ದಾರೆ.
ಹಣ ಕಳುವಾಗುತ್ತಿದ್ದಂತೆ ಕಂಪನಿ ಆಂತರಿಕೆ ತನಿಖೆ ನಡೆಸಿದಾಗ ತನ್ನದೇ ಕಂಪನಿ ಉದ್ಯೋಗಿ ರಾಹುಲ್ ಅಗರ್ವಾಲ್ ಲ್ಯಾಪ್ ಟಾಪ್ ಮೂಲಕ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಕಂಪನಿ ನೀಡಿದ್ದ ಪ್ಯಾಪ್ ಟಾಪ್ ನ್ನೇ ಬಳಸಿಕೊಂಡು ರಾಹುಲ್ ಮತ್ತೊಂದು ಕಂಪನಿಗೆ ಪಾರ್ಟ್ ಟೈಮ್ ಮೂಲಕ ಕೆಲಸ ಮಾಡಿ 15 ಲಕ್ಷ ಹಣ ಪಡೆಯುತ್ತಿದ್ದ. ಈ ವೇಳೆ ಸೈಬರ್ ವಂಚಕರು ಈತನ ಲ್ಯಾಪ್ ಟಾಪ್ ಮೂಲಕವಾಗಿ ನೆಬಿಲೊ ಕಂಪನಿ ಸರ್ವರ್ ಹ್ಯಾಕ್ ಮಾಡಿ 44 ಮಿಲಿಯನ್ ಡಾಲರ್ ಹಣ ದೋಚಿದ್ದಾರೆ. ಪ್ರಕರಣ ಸಂಬಂಧ ರಾಹುಲ್ ಅಗರ್ವಾಲ್ ನನ್ನು ಬಂಧಿಸಿ, ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ.
ಈ ಮೂಲಕ ಒಂದೇ ಕೇಸ್ ನಲ್ಲಿ ಬರೋಬ್ಬರಿ 378 ಕೋಟಿಯಷ್ಟು ಕ್ರಿಪ್ಟೋ ಕರೆನ್ಸಿ ದೋಚಲಾಗಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಅತಿದೊಡ್ಡ ಸೈಬರ್ ವಂಚನೆ ಎಂದು ತಿಳಿದುಬಂದಿದೆ.