ಬೆಂಗಳೂರು : 545 ಪಿಎಸ್ ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರ್. ಡಿ ಪಾಟೀಲ್ ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಜೆಐ ಬಿ ಆರ್ ಗವಾಯಿ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ಇಂದು ವಿಚಾರಣೆ ನಡೆದಿದೆ. ಚಿಕಿತ್ಸೆಗಾಗಿ ದಯವಿಟ್ಟು ಕನಿಷ್ಟ 8 ವಾರ ಜಾಮೀನು ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಸುಪ್ರೀಂಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಕಲ್ಬುರ್ಗಿಯಲ್ಲಿ ಹಾಗೂ ಯಾದಗಿರಿಯಲ್ಲಿ ಪರೀಕ್ಷೆ ಬರೆಯುವಾಗ ಅಕ್ರಮ ಎಸಗಿದ್ದ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ 16 ಜನರನ್ನು ಬಂಧಿಸಲಾಗಿತ್ತು. ಪರೀಕ್ಷೆ ಬರೆಯುತ್ತಿದ್ದ ವೇಳೆ ಬ್ಲೂಟೂತ್ ಬಳಸಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಭ್ಯರ್ಥಿಗಳನ್ನು ಬಂಧಿಸಿದ್ದರು. ನಂತರ ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ನನ್ನು ಪೊಲೀಸರು ಬಂಧಿಸಿದ್ದರು. 545 ಪಿಎಸ್ ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಸೇರಿದಂತೆ ಕೆಇಎ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್. ಡಿ ಪಾಟೀಲ್ ಕೈವಾಡವಿತ್ತು.