ಬೆಂಗಳೂರು: ಮಾಜಿ ಸಂಸದ ‘ ಪ್ರಜ್ವಲ್ ರೇವಣ್ಣ’ ವಿರುದ್ಧದ ಅತ್ಯಾಚಾರ ಕೇಸ್ ಗೆ ಸಂಬಂಧಿಸಿದಂತೆ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿಕೆಯಾಗಿದೆ. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಕೆಆರ್ ನಗರ ಮೂಲದ ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿಲ್ಲ.
ಪ್ರಜ್ವಲ್ ರೇವಣ್ಣರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಎರಡೂ ಕಡೆ ವಕೀಲರಿಂದ ಸ್ಪಷ್ಟನೆ ಕೇಳಿದ ಕೋರ್ಟ್ ಆಗಸ್ಟ್ 1 ಕ್ಕೆ ತೀರ್ಪು ಮುಂದೂಡಿದೆ. ಆಗಸ್ಟ್ 1 ಕ್ಕೆ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದೆ. ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪು ಮುಂದೂಡಿಕೆಯಾಗಿದೆ ಎಂದು ಜಡ್ಜ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 18ರಂದು ವಾದ ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ವಕೀಲರಿಂದ ಸ್ಪಷ್ಟನೆ ಕೇಳಿ ತೀರ್ಪು ಮುಂದೂಡಿದ್ದಾರೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ ಸಂಬಂಧ ಸಿಐಡಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಜ್ವಲ್ ಪ್ರಕರಣದಲ್ಲಿ ಪ್ರಕಟವಾಗುತ್ತಿರುವ ಮೊದಲ ತೀರ್ಪು ಇದಾಗಿದೆ.